ಧಾರವಾಡ: ಧಾರವಾಡ ಹೈಕೋರ್ಟ್ ಪೀಠದ ಆ. 1ರಂದು ಎಲ್ಲ 7 ನ್ಯಾಯಾಲಯದ ಸಭಾಂಗಣದಲ್ಲಿ ಮಹಿಳಾ ನ್ಯಾಯಾಧೀಶರೇ ಎಲ್ಲ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ನ್ಯಾಯಾಂಗ ವ್ಯವಸ್ಥೆಯಲ್ಲಿ ಇದೊಂದು ಐತಿಹಾಸಿಕ ಮೈಲುಗಲ್ಲಾಗಿದೆ.
ಈ ಕುರಿತು ಪ್ರಕಟಣೆ ನೀಡಿರುವ ಹೈಕೋರ್ಟ್ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ವಿಭು ಬಖ್ರು ಅವರು ಈ ಐತಿಹಾಸಿಕ ರೋಸ್ಟರ್ ಆದೇಶವನ್ನು ಹೊರಡಿಸಿದ್ದಾರೆ. ಇದಕ್ಕೆ ಹೈಕೋರ್ಟ್ ವಕೀಲರ ಸಂಘ ಕೃತಜ್ಞತೆ ಸಲ್ಲಿಸಿದೆ ಎಂದಿದ್ದಾರೆ.
ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಡೀ ಪೀಠವು ಯಾವುದೇ ಪುರುಷ ನ್ಯಾಯಾಧೀಶರಿಲ್ಲದೇ ಕೇವಲ ಮಹಿಳಾ ನ್ಯಾಯಾಧೀಶರಿಂದ ದಿನಪೂರ್ವ ಕಲಾಪಗಳನ್ನು ನಡೆಸುವುದು ದಾಖಲೆಯಾಗಿದೆ. ಜೊತೆಗೆ ಈ ಐತಿಹಾಸಿಕ ಮೈಲಿಗಲ್ಲಿಗಾಗಿ ಧಾರವಾಡ ಪೀಠವನ್ನು ಆಯ್ಕೆ ಮಾಡಿರುವುದು ವಿಕೇಂದ್ರೀಕರಣ ಮತ್ತು ಪ್ರಾದೇಶಿಕ ಪೀಠಗಳ ಸಾಂಸ್ಥಿಕ ಬಲವರ್ಧನೆಯ ಮೇಲಿನ ನಂಬಿಕೆಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಆ. 1ರಂದು ನಡೆಯಲಿರುವ ಈ ಐತಿಹಾಸಿಕ ಕಲಾಪಗಳು ಅತ್ಯಂತ ಸುಗಮವಾಗಿ ಮತ್ತು ಮಾದರಿಯಾಗಿ ನಡೆಸಲು ಉತ್ತರ ಕರ್ನಾಟಕದ ಎಲ್ಲ ವಕೀಲರು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.






















