ದಾವಣಗೆರೆ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಭಾನುವಾರ ಜಿಲ್ಲೆಯ 13 ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಿನ ಭದ್ರತೆ ಮತ್ತು ಅಗತ್ಯ ಸೌಲಭ್ಯಗಳೊಂದಿಗೆ ಆರಂಭಗೊಂಡಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6.15ರ ವರೆಗೆ ನಡೆಯುತ್ತಿರುವ ಪರೀಕ್ಷೆಗೆ ಜಿಲ್ಲೆಯಾದ್ಯಂತ ಒಟ್ಟು 7,416 ಅಭ್ಯರ್ಥಿಗಳು ಹಾಜರಾಗಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯುತ್, ಕುಡಿಯುವ ನೀರು, ಗಾಳಿ-ಬೆಳಕು, ಶೌಚಾಲಯ ಹಾಗೂ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗಿದೆ. ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ಸಾಗಣೆ, ಸಿಸಿಟಿವಿ ಕಣ್ಗಾವಲು, ಪೊಲೀಸ್ ಬಂದೋಬಸ್ತ್ ಸೇರಿದಂತೆ ಎಲ್ಲಾ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಕೇಂದ್ರಗಳ ಪ್ರವೇಶ ದ್ವಾರಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಅಭ್ಯರ್ಥಿಗಳು ಹಾಗೂ ಮೇಲ್ವಿಚಾರಕರು ಮೊಬೈಲ್ ಫೋನ್, ಬ್ಲೂಟೂತ್ ಸಾಧನಗಳು, ಇಯರ್‌ಫೋನ್, ಮೈಕ್ರೋಫೋನ್, ಪೇಜರ್, ವೈರ್‌ಲೆಸ್ ಸೆಟ್, ಲಾಗ್ ಟೇಬಲ್, ಕ್ಯಾಲ್ಕುಲೇಟರ್ ಮತ್ತು ಗಡಿಯಾರ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಲಾಗಿಲ್ಲ.
ಪರೀಕ್ಷಾ ಕೇಂದ್ರಗಳ ಹೊರಭಾಗದಲ್ಲಿ ಅಭ್ಯರ್ಥಿಗಳ ಪೋಷಕರು ಆತಂಕ ಮತ್ತು ನಿರೀಕ್ಷೆಯ ನಡುವೆ ಸಮಯ ಕಳೆಯುತ್ತಿರುವ ದೃಶ್ಯ ಕಂಡು ಬಂತು. ಹಲವು ಕೇಂದ್ರಗಳ ಸುತ್ತಮುತ್ತಲಿನ ಮರಗಳ ನೆರಳಿನಲ್ಲಿ ಕುಳಿತು ತಮ್ಮ ಮಕ್ಕಳು ಪರೀಕ್ಷೆ ಮುಗಿಸಿ ಹೊರ ಬರುವುದನ್ನು ಕಾದು ನೋಡುತ್ತಿರುವುದು ಗಮನ ಸೆಳೆಯಿತು.
ನೀಟ್ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಕೇಂದ್ರಗಳಲ್ಲಿ ನಿರಂತರ ನಿಗಾ ವಹಿಸಿದ್ದಾರೆ. ಪರೀಕ್ಷೆ ಶಾಂತಿಯುತವಾಗಿ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.





















