ದಾವಣಗೆರೆ: ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂಕಾಳ ವೈದ್ಯ ಅವರ ಬದಲಿಗೆ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಚಿವ ಸ್ಥಾನ ನೀಡಿರುವುದು ಬ್ಲ್ಯಾಕ್‌ಮೇಲ್ ರಾಜಕಾರಣದ ಫಲ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಆರೋಪಿಸಿದರು.
ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಸದಸ್ಯರು, ತಾವು ಹಾಗೂ ತಮ್ಮ ಪುತ್ರ ಶಾಸಕರಾಗಿದ್ದು, ಮೂವರೂ ರಾಜೀನಾಮೆ ನೀಡಿ ಬೇರೆ ಪಕ್ಷ ಸೇರುವುದಾಗಿ ಎಸ್.ಎಸ್. ಮಲ್ಲಿಕಾರ್ಜುನ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ತಿಳಿಸಿದ್ದಾಗಿ ಮಾಧ್ಯಮಗಳಲ್ಲಿ ನೋಡಿದ್ದೇನೆ. ಇಂತಹ ಬೆಳವಣಿಗೆಗಳೇ ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುತ್ತಿರುವುದನ್ನು ತೋರಿಸುತ್ತವೆ ಎಂದು ಹೇಳಿದರು.
ಕಳೆದ 20 ವರ್ಷಗಳಿಂದ ಹೊಂದಾಣಿಕೆ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿಯೇ ಕುಂಠಿತವಾಗಿದೆ. ಕಾಂಗ್ರೆಸ್ ಹೈಕಮಾಂಡ್‌ಗೆ ಒತ್ತಡ ತಂದು ಎಸ್.ಎಸ್. ಮಲ್ಲಿಕಾರ್ಜುನ ಅವರು ಸಚಿವ ಸ್ಥಾನ ಪಡೆದಿದ್ದಾರೆ ಎಂದು ಆರೋಪಿಸಿದರು.
ಶಾಮನೂರು ಕುಟುಂಬಕ್ಕೆ ಅಗತ್ಯ ಬಂದಾಗಲೆಲ್ಲ ವೀರಶೈವ ಮಹಾಸಭೆಯ ಹೆಸರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧವೂ ಹರೀಶ್ ಕಿಡಿಕಾರಿದರು.
ಹೆದರಿಕೆ ಮತ್ತು ಒತ್ತಡದ ರಾಜಕಾರಣದಿಂದ ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಎಸ್.ಎಸ್. ಮಲ್ಲಿಕಾರ್ಜುನ ಅವರು ʻಡೊನೇಷನ್ ಫ್ಯಾಕ್ಟರಿʼ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಿಲ್ಲ ಎಂದು ಟೀಕಿಸಿದರು.
ಇದೇ ವೇಳೆ, ಮಾಯಕೊಂಡ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮೊದಲ ಪಟ್ಟಿಯಲ್ಲೇ ಕೆ.ಎಸ್. ಬಸವಂತಪ್ಪ ಅವರ ಹೆಸರು ಬಂದಿರುವುದು ಹೆಮ್ಮೆಯ ಸಂಗತಿ. ಬಡವರ ಕಷ್ಟ ಅರಿತಿರುವ ಅವರಿಗೆ ಸಚಿವ ಸ್ಥಾನ ಸಿಕ್ಕಿರುವುದು ಸಂತಸದ ವಿಷಯ. ಅವರು ಉತ್ತಮವಾಗಿ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.






















