SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಮೊದಲ ಬಾರಿಗೆ ಸಚಿವರಾಗಿ ಕೆ.ಎಸ್. ಬಸವಂತಪ್ಪ ಪ್ರಮಾಣ ವಚನ

ಮೊದಲ ಬಾರಿಗೆ ಸಚಿವರಾಗಿ ಕೆ.ಎಸ್. ಬಸವಂತಪ್ಪ ಪ್ರಮಾಣ ವಚನ

0
119

ಬೆಂಗಳೂರು: ದಾವಣಗೆರೆ ಜಿಲ್ಲೆಯ ಮಾಯಕೊಂಡ (ಎಸ್‌ಸಿ ಮೀಸಲು) ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಸ್. ಬಸವಂತಪ್ಪ ಅವರು ಕರ್ನಾಟಕ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದು, ಹಂತಹಂತವಾಗಿ ಬೆಳೆದು ಇದೀಗ ಮೊದಲ ಬಾರಿಗೆ ಸಚಿವ ಸ್ಥಾನ ಅಲಂಕರಿಸುತ್ತಿರುವುದು ಅವರ ರಾಜಕೀಯ ಜೀವನದ ಮಹತ್ವದ ಮೈಲಿಗಲ್ಲಾಗಿದೆ.

1969ರ ಜುಲೈ 20ರಂದು ದಾವಣಗೆರೆ ಜಿಲ್ಲೆಯ ಹಳೆ ಕುಂದುವಾಡ ಗ್ರಾಮದಲ್ಲಿ ಸಂಗಪ್ಪ ಹಾಗೂ ಹನುಮಕ್ಕ ದಂಪತಿಯ ಪುತ್ರರಾಗಿ ಜನಿಸಿದ ಬಸವಂತಪ್ಪ ಅವರು, ದಾವಣಗೆರೆಯ ಎಆರ್‌ಜಿ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದಾರೆ. ಪತ್ನಿ ಮಮತಾ ಗೃಹಿಣಿಯಾಗಿದ್ದು, ಪುತ್ರ ಸುಹಾಸ್ ಕೆ.ಬಿ. ಬಿ.ಕಾಂ ಪದವೀಧರರಾಗಿದ್ದಾರೆ. ಪುತ್ರಿ ಸಂಜನಾ ಕೆ.ಬಿ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ರಾಜಕೀಯಕ್ಕೆ ಬರುವ ಮೊದಲು ಬಸವಂತಪ್ಪ ಅವರು ಜೀವನೋಪಾಯಕ್ಕಾಗಿ ಸಣ್ಣಪುಟ್ಟ ವ್ಯಾಪಾರ ನಡೆಸುತ್ತಿದ್ದರು. ಬಳಿಕ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ದೂರಸಂಪರ್ಕ (ಟೆಲಿಕಾಂ) ಕಚೇರಿ, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಶೌಚಾಲಯಗಳ ಸ್ವಚ್ಛತಾ ನಿರ್ವಹಣೆಯ ಗುತ್ತಿಗೆ ಪಡೆದು ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು. ಸಾಮಾನ್ಯ ಕಾರ್ಮಿಕರೊಂದಿಗೆ ಕೆಲಸ ಮಾಡುತ್ತಲೇ ಜೀವನ ಕಟ್ಟಿಕೊಂಡ ಅವರು, ತಮ್ಮ ಪರಿಶ್ರಮ ಮತ್ತು ಸಂಘಟನಾ ಸಾಮರ್ಥ್ಯದಿಂದ ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡರು.

ಜಿಲ್ಲಾ ಪಂಚಾಯಿತಿಯಿಂದ ವಿಧಾನಸಭೆಯವರೆಗೆ: ಆನಗೋಡು ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಬಸವಂತಪ್ಪ ಅವರ ರಾಜಕೀಯ ಪಯಣ ಆರಂಭವಾಯಿತು. ಸ್ಥಳೀಯ ಮಟ್ಟದಲ್ಲಿ ಜನಸೇವೆ ಮೂಲಕ ಹೆಸರು ಮಾಡಿದ್ದ ಅವರು, ನಂತರ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದರು.

2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಯಕೊಂಡ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಕ್ಷೇತ್ರದಲ್ಲಿ ಜನಸಂಪರ್ಕ, ಸರಳ ವ್ಯಕ್ತಿತ್ವ ಹಾಗೂ ಸಂಘಟನಾ ಚಟುವಟಿಕೆಗಳಿಂದ ಗಮನ ಸೆಳೆದ ಅವರು, ಇದೀಗ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುತ್ತಿದ್ದಾರೆ.

ಸಾಮಾನ್ಯ ಹಿನ್ನೆಲೆಯಿಂದ ಸಚಿವ ಸಂಪುಟದವರೆಗೆ: ಸಣ್ಣ ವ್ಯಾಪಾರಿಯಿಂದ ಆರಂಭವಾಗಿ ಸ್ವಚ್ಛತಾ ಗುತ್ತಿಗೆದಾರ, ಜಿಲ್ಲಾ ಪಂಚಾಯಿತಿ ಸದಸ್ಯ, ಶಾಸಕ ಮತ್ತು ಇದೀಗ ಸಚಿವ ಎಂಬ ಹಾದಿಯನ್ನು ಕ್ರಮಿಸಿರುವ ಕೆ.ಎಸ್. ಬಸವಂತಪ್ಪ ಅವರ ರಾಜಕೀಯ ಪಯಣ ಅನೇಕ ಕಾರ್ಯಕರ್ತರಿಗೆ ಸ್ಫೂರ್ತಿದಾಯಕವಾಗಿದೆ. ಜನರೊಂದಿಗೆ ನಿರಂತರ ಸಂಪರ್ಕ, ಪಕ್ಷದ ಮೇಲಿನ ನಿಷ್ಠೆ ಹಾಗೂ ಸಂಘಟನೆಯಲ್ಲಿ ತೋರಿದ ಸಕ್ರಿಯತೆಯ ಫಲವಾಗಿ ಅವರಿಗೆ ಸಚಿವ ಸ್ಥಾನ ದೊರೆತಿದೆ.

ದಾವಣಗೆರೆ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿರುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶೇಷ ಮಹತ್ವ ಪಡೆದುಕೊಂಡಿದ್ದು, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.