ದಾವಣಗೆರೆ: ಕಾಂಗ್ರೆಸ್ ಪಕ್ಷದ ಒಳಗಿನ ಶಿಸ್ತು ಮತ್ತು ನಿರ್ಧಾರ ಪ್ರಕ್ರಿಯೆಗಳ ಬಗ್ಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಹತ್ವದ ಹೇಳಿಕೆ ನೀಡಿದ್ದಾರೆ. ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಒಂದು ಪಕ್ಷದಲ್ಲಿ ಒಂದು ಸಿದ್ಧಾಂತ ಇರುತ್ತದೆ, ನೈತಿಕತೆ ಇರುತ್ತದೆ. ಪಕ್ಷ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಅದರ ಹಿಂದೆ ಸ್ಪಷ್ಟವಾದ ಸಿದ್ಧಾಂತ ಮತ್ತು ನೈತಿಕತೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ಮುಖ್ಯಮಂತ್ರಿ ಕಾರ್ಯದರ್ಶಿ ನಸೀರ್ ಅಹ್ಮದ್ ವಿರುದ್ಧ ಕ್ರಮ ಕೈಗೊಂಡಿರುವ ಕುರಿತು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕಾಂಗ್ರೆಸ್ ಶಿಸ್ತುಬದ್ಧ ಪಕ್ಷವಾಗಿದ್ದು, ಕೆಪಿಸಿಸಿ ಹಾಗೂ ಎಐಸಿಸಿ ಮಟ್ಟದಲ್ಲಿ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಬಳಿಕವೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ರಾಜ್ಯದ ರಾಜಕೀಯ ಪರಿಸ್ಥಿತಿ, ಚುನಾವಣಾ ಸಮಯದಲ್ಲಿ ನಾಯಕರ ನಡೆ-ನುಡಿ ಹಾಗೂ ಅವರ ಪಾತ್ರಗಳನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕವೇ ಪಕ್ಷ ಅಂತಿಮ ನಿರ್ಧಾರಕ್ಕೆ ಬರುತ್ತದೆ. ಈ ಹಿನ್ನೆಲೆಯಲ್ಲಿ ತೆಗೆದುಕೊಳ್ಳಲಾದ ಕ್ರಮಗಳು ಸಮಂಜಸವೆಂದು ಅವರು ಸಮರ್ಥಿಸಿದರು.
ಇನ್ನೊಂದೆಡೆ, ‘ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಟಿಕೆಟ್ ಕೊಡುವ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ಸಲಹೆ ನೀಡಿದ್ದರು. ಆದರೆ ಪಕ್ಷವು ಅದಕ್ಕೆ ಕ್ರಮ ತೆಗೆದುಕೊಂಡಿಲ್ಲ. ನಾವು ಟಿಕೆಟ್ ಕೇಳಿದ್ದಕ್ಕೆ ಕ್ರಮವೇಕೆ? ಎಂದು ಮುಸ್ಲಿಂ ನಾಯಕರು ಪ್ರಶ್ನೆ ಮುಂದಿಟ್ಟ ಪ್ರಶ್ನೆಗೆ ಪ್ರತಿಕ್ರಿಯಿಸಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರಿಗೆ ಟಿಕೆಟ್ ನೀಡುವ ಬಗ್ಗೆ ಶಾಮನೂರು ಶಿವಶಂಕರಪ್ಪ ಅವರು ನೀಡಿದ ಸಲಹೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಾಮನೂರು ಅವರು ಕೇವಲ ಅಭಿಪ್ರಾಯ ವ್ಯಕ್ತಪಡಿಸಿದ್ದು, ಪಕ್ಷದ ವಿರುದ್ಧ ಕೆಲಸ ಮಾಡಿದಂತಿಲ್ಲ ಎಂದು ಹೇಳಿದರು.
ಗೆಲುವಿನ ವಿಶ್ವಾಸ: ‘ನಮಗೆ ಯಾವುದೇ ಟೆನ್ಶನ್ ಇಲ್ಲ. ಜನರು ಯಾವತ್ತೂ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ. ಸಮರ್ಥ್ ಅವರು ಉತ್ತಮ ಬಹುಮತದಿಂದ ಗೆಲುವು ಸಾಧಿಸುತ್ತಾರೆ. 8,000, 15,000, 30,000 ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳುತ್ತಾರೆ. ಮೇ 4ರಂದು ಫಲಿತಾಂಶ ಪ್ರಕಟಿಸಿದ ಮೇಲೆ ಸಮರ್ಥ್ ಶಾಮನೂರು ಅವರು ಜಯಿಸುವುದರಲ್ಲಿ ಯಾರೂ ಸಂದೇಹ ಇಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.






















