ದಾವಣಗೆರೆ: ತಾಲ್ಲೂಕಿನ ಕೊಗ್ಗನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸೋಮವಾರ ಕಾರು ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿದ್ದು, ಆರು ಮಂದಿ ಗಾಯಗೊಂಡಿದ್ದಾರೆ.
ಮೃತರನ್ನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ನಾಗರಾಜಪ್ಪ ಅವರ ಪುತ್ರಿ, ದಾವಣಗೆರೆಯ ಎವಿಕೆ ಕಾಲೇಜಿನ ವಿದ್ಯಾರ್ಥಿನಿ ಋತು (17) ಎಂದು ಗುರುತಿಸಲಾಗಿದೆ.
ಹೆಬ್ಬಾಳು ಗ್ರಾಮದ ಪ್ರಕಾಶ್ ನಾಯ್ಕ ಅವರು ಪುತ್ರಿ ಸಿಂಚನಾ ಹಾಗೂ ಋತು ಅವರನ್ನು ದ್ವಿಚಕ್ರ ವಾಹನದಲ್ಲಿ ಹೆಬ್ಬಾಳು ಗ್ರಾಮದಿಂದ ದಾವಣಗೆರೆ ಕಡೆಗೆ ಕರೆತರುತ್ತಿದ್ದರು. ಈ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಋತು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ಚಾಲಕ ಪ್ರಕಾಶ್ ನಾಯ್ಕ, ಸಿಂಚನಾ ಹಾಗೂ ಕಾರಿನಲ್ಲಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತಿಳುವಳ್ಳಿ ಗ್ರಾಮದ ಸಂತೋಷ ಕುಮಾರ, ಸಾನ್ವಿತಾ, ಶಮಿತ್ ಮತ್ತು ದೀಪಾ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಕುರಿತು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






















