ದಾವಣಗೆರೆ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಮುಂಬರುವ ಬೇಸಿಗೆ ಹಂಗಾಮಿನಲ್ಲಿ ಕನಿಷ್ಠ 120 ದಿನಗಳ ಕಾಲ ನೀರು ಹರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ತಕ್ಷಣ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆದು, ನೀರು ಬಿಡುಗಡೆ ಮಾಡುವ ದಿನಾಂಕ ಹಾಗೂ ವೇಳಾಪಟ್ಟಿಯನ್ನು ಪ್ರಕಟಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮತ್ತು ಮಾಜಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್ ಒತ್ತಾಯಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರಿಗೆ ಬೇಸಿಗೆ ಬೆಳೆಗೆ ನೀರು ಒದಗಿಸುವುದು ಸೇರಿದಂತೆ ಭದ್ರಾ ಜಲಾಶಯದ ನೀರಿನ ಹಂಚಿಕೆ ಮತ್ತು ಕಾಲುವೆಗಳ ದುರಸ್ತಿ ವಿಚಾರವಾಗಿ ಮಾತನಾಡಿದ ಅವರು, ತೀವ್ರ ಬರಗಾಲ ಹಾಗೂ ನೀರಿನ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸುವ ಕುರಿತು ಸರ್ಕಾರ ಮುಂಚಿತವಾಗಿಯೇ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇದರಿಂದ ರೈತರಿಗೆ ಬಿತ್ತನೆ, ಸಸಿಮಡಿ ಹಾಗೂ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಒಟ್ಟು 3 ಟಿಎಂಸಿ ನೀರು ಹಂಚಿಕೆ ಮಾಡಬೇಕೆಂದು ರೈತರು ಒತ್ತಾಯಿಸುತ್ತಿದ್ದು, ಈಗಾಗಲೇ ಒಂದು ಟಿಎಂಸಿ ಹಾಗೂ ಹೆಚ್ಚುವರಿಯಾಗಿ ಮತ್ತೊಂದು ಟಿಎಂಸಿ ನೀರು ಬಿಡುಗಡೆಗೆ ಆದೇಶಿಸಲಾಗಿದೆ. ಆದರೆ, ರೈತರ ಬೇಡಿಕೆಯಂತೆ ನೀರಿನ ಹಂಚಿಕೆ ಮತ್ತು ಬಿಡುಗಡೆ ಕುರಿತು ಸ್ಪಷ್ಟತೆ ಇರಬೇಕು. ಮುಂಬರುವ ಬೇಸಿಗೆಯಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ದೊರೆಯುವಂತೆ ಸರ್ಕಾರ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಭದ್ರಾ ಜಲಾಶಯದ ನಾಲೆಗಳಿಗೆ 17.40 ಟಿಎಂಸಿ ನೀರು ಹರಿಸುವ ಅಗತ್ಯವಿದ್ದರೂ ನೀರು ಬಿಡುಗಡೆ ಮಾಡುತ್ತಿಲ್ಲ ಮತ್ತು ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ವ್ಯವಸ್ಥೆ ಸೇರಿದಂತೆ ಸಂಬಂಧಿತ ಕಾಮಗಾರಿಗಳಿಗೆ ಕೇವಲ 30 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದು ಸಮರ್ಪಕವಲ್ಲ. ಇಷ್ಟು ಕಡಿಮೆ ಅನುದಾನದಲ್ಲಿ ಅಗತ್ಯ ಕಾಮಗಾರಿಗಳನ್ನು ಪೂರ್ಣಗೊಳಿಸುವುದು ಕಷ್ಟಸಾಧ್ಯ. ನಾಲೆಗಳ ಉಪಕಾಲುವೆಗಳು ಹಾಳಾಗಿದ್ದು, ಅಲ್ಲಲ್ಲಿ ಗಿಡಗಂಟೆಗಳು ಬೆಳೆದು ಹೂಳು ತುಂಬಿಕೊಂಡಿವೆ. ಕೇವಲ ತೇಪೆ ಹಾಕುವ ಕೆಲಸದಿಂದ ಸಮಸ್ಯೆ ಬಗೆಹರಿಯುವುದಿಲ್ಲ. ನೀರು ಹರಿಸುವ ಮುನ್ನವೇ ಸಮಗ್ರ ದುರಸ್ತಿ ಹಾಗೂ ಹೂಳೆತ್ತುವ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ಸಂಬಂಧ ರೈತರು ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಸರ್ಕಾರ ರೈತರ ಮನವಿಗೆ ಸ್ಪಂದಿಸಿ ಬೇಸಿಗೆ ಹಂಗಾಮಿನ ನೀರಾವರಿ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅಚ್ಚುಕಟ್ಟು ಪ್ರದೇಶದ ರೈತರಿಗೆ ಅನ್ಯಾಯವಾಗುವ ರೀತಿಯಲ್ಲಿ ನೀರಿನ ಹಂಚಿಕೆ ನಿರ್ಧಾರ ಕೈಗೊಂಡರೆ ಅದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಕಬ್ಬು ಬೆಳೆಗಾರರು ಸೇರಿದಂತೆ ವಿವಿಧ ಬೆಳೆಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ. ಕಾವೇರಿ ಜಲಾಶಯದ ನೀರಿನ ವಿಚಾರವಾಗಿಯೂ ರೈತರ ಹೋರಾಟಗಳು ನಡೆಯುತ್ತಿವೆ. ರೈತರ ಸಮಸ್ಯೆಗಳನ್ನು ರಾಜಕೀಯಗೊಳಿಸದೆ ಪಕ್ಷಾತೀತವಾಗಿ ಎಲ್ಲರೂ ಒಂದಾಗಿ ರೈತರ ಪರವಾಗಿ ಧ್ವನಿ ಎತ್ತಬೇಕು. ಅಗತ್ಯಬಿದ್ದರೆ ಪಾದಯಾತ್ರೆ ಸೇರಿದಂತೆ ಹೋರಾಟ ರೂಪಿಸಿ ರೈತರ ಹಿತ ಕಾಯಬೇಕು. ರೈತರ ಬದುಕಿಗೆ ಮರಣಶಾಸನವಾಗುವಂತಹ ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಾರದು ಎಂದು ಹೇಳಿದರು.
ರೈತರ ಹಿತ ಕಾಪಾಡಲು ತಕ್ಷಣ ಐಸಿಸಿ ಸಭೆ ನಡೆಸಿ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಕಾಲುವೆಗಳ ದುರಸ್ತಿ ಮತ್ತು ಹೂಳೆತ್ತುವ ಕಾಮಗಾರಿಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರನ್ನು ಸಂಘಟಿಸಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.





















