ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಸಮ್ಮತಿ ಸೂಚಿಸಿದ್ದು, ಪ್ರಕರಣದಲ್ಲಿ ಮಹತ್ವದ ಕಾನೂನು ಬೆಳವಣಿಗೆ ನಡೆದಿದೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಸೋಮವಾರ ನಡೆದ ವಿಚಾರಣೆ ವೇಳೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರದೋಷ್ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರು ಪ್ರದೋಷ್ ಅವರನ್ನು ನೇರವಾಗಿ ವಿಚಾರಿಸಿದರು.
ಮಾಫಿ ಸಾಕ್ಷಿಯಾಗಲು ಸಂಬಂಧಿಸಿದ ನ್ಯಾಯಾಲಯದ ಆದೇಶದ ಪ್ರತಿ ತಮಗೆ ತಲುಪಿದೆಯೇ ಹಾಗೂ ಆದೇಶದಲ್ಲಿರುವ ನಿಯಮ ಮತ್ತು ಷರತ್ತುಗಳಿಗೆ ಸಮ್ಮತಿ ಇದೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರದೋಷ್, ಆದೇಶದ ಪ್ರತಿ ತಮಗೆ ದೊರೆತಿದ್ದು, ಅದರಲ್ಲಿರುವ ಎಲ್ಲ ನಿಯಮ ಹಾಗೂ ಷರತ್ತುಗಳಿಗೆ ತಮ್ಮ ಒಪ್ಪಿಗೆ ಇದೆ ಎಂದು ತಿಳಿಸಿದರು.
ಪ್ರದೋಷ್ ಅವರ ಸಮ್ಮತಿ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ 23ರಂದು ಅವರ ಸಾಕ್ಷ್ಯ ದಾಖಲಿಸಲು ಸಮನ್ಸ್ ಜಾರಿ ಮಾಡುವಂತೆ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಪ್ರಮುಖ ಬೆಳವಣಿಗೆಯಾಗಲಿದೆ.




















