SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ದಾಂಡೇಲಿಯಲ್ಲಿ ಕಾಮಾಲೆ, ಟೈಫಾಯಿಡ್ ಭೀತಿ! ಮಕ್ಕಳೇ ಹೆಚ್ಚು ಟಾರ್ಗೆಟ್?

ದಾಂಡೇಲಿಯಲ್ಲಿ ಕಾಮಾಲೆ, ಟೈಫಾಯಿಡ್ ಭೀತಿ! ಮಕ್ಕಳೇ ಹೆಚ್ಚು ಟಾರ್ಗೆಟ್?

0
26
ಸಾಂದರ್ಭಿಕ ಚಿತ್ರ

24×7 ನೀರು ಸರಬರಾಜು ಟ್ರಯಲ್ ಬೆನ್ನಲ್ಲೇ ರೋಗ ಉಲ್ಬಣದ ಆತಂಕ; ಕುಡಿಯುವ ನೀರಿನ ಗುಣಮಟ್ಟದ ಬಗ್ಗೆ ಸಾರ್ವಜನಿಕರ ಅನುಮಾನ

ದಾಂಡೇಲಿ (ಉತ್ತರ ಕನ್ನಡ) ಸಂ.ಕ. ಸಮಾಚಾರ : ದಾಂಡೇಲಿ ನಗರದಲ್ಲಿ ಕಾಮಾಲೆ (ಜಾಂಡೀಸ್) ಟೈಫಾಯಿಡ್ ಪ್ರಕರಣಗಳ ಹೆಚ್ಚಳದ ಆತಂಕ ಮನೆಮಾಡಿದೆ. ನಗರದ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಪ್ರತಿನಿತ್ಯ ಕಾಮಾಲೆ, ಟೈಫಾಯಿಡ್ ಲಕ್ಷಣಗಳಿಂದ ಬಳಲುತ್ತಿರುವ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಿದ್ದು, ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಬಾಧಿತರಾಗುತ್ತಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆ ಪಾಲಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಆರೋಗ್ಯ ಇಲಾಖೆ ಹಾಗೂ ನಗರಾಡಳಿತ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂಬ ಆಗ್ರಹ ಕೇಳಿಬಂದಿದೆ.

ನಗರದ ಕೆಲ ಶಾಲೆಗಳಲ್ಲಿ ಈಗಾಗಲೇ ವಿದ್ಯಾರ್ಥಿಗಳಿಗೆ ಸ್ವಚ್ಛತೆ, ಶುದ್ಧ ಕುಡಿಯುವ ನೀರಿನ ಹಾಗೂ ಆಹಾರ ಸೇವನೆಗೂ ಮುನ್ನ ಕೈತೊಳೆಯುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆತಂಕಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ರೋಗದ ಮೂಲ ಪತ್ತೆಹಚ್ಚುವುದು ಅತ್ಯಗತ್ಯವಾಗಿದೆ.

ಹೊಸ ಪೈಪ್‌ಲೈನ್ ಟ್ರಯಲ್ ರನ್ ಬೆನ್ನಲ್ಲೇ ಕಾಮಾಲೆ ಆತಂಕ! : ದಾಂಡೇಲಿ ನಗರದಲ್ಲಿ 24×7 ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಹಳೆಯ ಪೈಪ್‌ಲೈನ್‌ಗಳ ಬದಲಿಗೆ ಹೊಸ ಪೈಪ್‌ಗಳ ಮೂಲಕ ನೀರು ಸರಬರಾಜು ಮಾಡುವ ಪ್ರಾಯೋಗಿಕ ಪ್ರಕ್ರಿಯೆ ಆರಂಭವಾಗಿದೆ. ಇದರ ಬೆನ್ನಲ್ಲೇ ಕಾಮಾಲೆ, ಟೈಫಾಯಿಡ್ ಪ್ರಕರಣಗಳು ಕಾಣಿಸಿಕೊಂಡಿವೆ ಎಂಬುದು ಸಾರ್ವಜನಿಕರ ಪ್ರಮುಖ ಆರೋಪವಾಗಿದೆ.

ಹೊಸ ಪೈಪ್‌ಲೈನ್ ಮೂಲಕ ನೀರು ಪೂರೈಸುವ ಮುನ್ನ ಅಗತ್ಯ ಸ್ವಚ್ಛತೆ, ಸೋಂಕು ನಿವಾರಣೆ, ಸೋರಿಕೆ ಪರಿಶೀಲನೆ ಹಾಗೂ ನೀರಿನ ಗುಣಮಟ್ಟದ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸಲಾಗಿದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕುಡಿಯುವ ನೀರಿನ ಪೈಪ್‌ಗಳಿಗೆ ಒಳಚರಂಡಿ ನೀರು ಸೇರುವ ಸಾಧ್ಯತೆ ಇದೆಯೇ ಎಂಬ ಬಗ್ಗೆಯೂ ಸಮಗ್ರ ತಾಂತ್ರಿಕ ಪರಿಶೀಲನೆ ನಡೆಸಬೇಕೆಂಬ ಒತ್ತಾಯ ವ್ಯಕ್ತವಾಗಿದೆ.

ಆದರೆ ಹೊಸ ಪೈಪ್‌ಲೈನ್‌ಗಳಿಗೂ ಕಾಮಾಲೆ, ಟೈಫಾಯಿಡ್ ಪ್ರಕರಣಗಳಿಗೂ ನೇರ ಸಂಬಂಧವಿದೆ ಎಂಬುದು ಈವರೆಗೆ ದೃಢಪಟ್ಟಿಲ್ಲ. ಹೀಗಾಗಿ ಆರೋಪಗಳ ಸತ್ಯಾಸತ್ಯತೆಯನ್ನು ವೈಜ್ಞಾನಿಕ ಪರೀಕ್ಷೆಗಳ ಮೂಲಕ ಪತ್ತೆ ಹಚ್ಚುವದು ಅಗತ್ಯವಾಗಿದೆ. ಆರೋಗ್ಯ ಇಲಾಖೆ, ನಗರಸಭೆ ಜಂಟಿಯಾಗಿ ತಕ್ಷಣ ಕಾರ್ಯ ಪ್ರವರ್ತವಾಗಿ ಅಗತ್ಯವಿದ್ದಲ್ಲಿ ಹೆಪಟೈಟಿಸ್ ಎ ಮತ್ತು ಇ ಸೋಂಕುಗಳ ವೈದ್ಯಕೀಯ ಪರೀಕ್ಷೆ ನಡೆಸಿ ರೋಗದ ನೈಜ ಕಾರಣ ಪತ್ತೆ ಹಚ್ಚಬೇಕು. ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ಅಗತ್ಯವಿದೆ.