ದಾವಣಗೆರೆ: ಸುತ್ತಮುತ್ತಲಿನ ಐದಾರು ಜಿಲ್ಲೆಗಳ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ನೂತನ ಎಂಆರ್ಐ ಸ್ಕ್ಯಾನಿಂಗ್ ಯಂತ್ರ ಅಳವಡಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಇದರ ಸದುಪಯೋಗಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಅನುಮೋದನೆ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಅವರು, ಎಂಆರ್ಐ ಯಂತ್ರ ಅಳವಡಿಕೆಗೆ ಸೂಕ್ತ ಸ್ಥಳಾವಕಾಶ, ಅಗತ್ಯ ಮೂಲಸೌಕರ್ಯ ಹಾಗೂ ರೋಗಿಗಳಿಗೆ ಅನುಕೂಲವಾಗುವ ವ್ಯವಸ್ಥೆಗಳ ಕುರಿತು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ ಅವರೊಂದಿಗೆ ಚರ್ಚಿಸಿದರು.
ಚಿಗಟೇರಿ ಜಿಲ್ಲಾಸ್ಪತ್ರೆ ದಾವಣಗೆರೆ ಮಾತ್ರವಲ್ಲದೆ ಸುತ್ತಮುತ್ತಲಿನ ಐದಾರು ಜಿಲ್ಲೆಗಳ ಜನರಿಗೆ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿದೆ. ಆದರೆ ಆಸ್ಪತ್ರೆಯಲ್ಲಿ ಸ್ವಂತ ಎಂಆರ್ಐ ಯಂತ್ರದ ಸೌಲಭ್ಯ ಇಲ್ಲದ ಕಾರಣ ಬಡ ರೋಗಿಗಳು ಸ್ಕ್ಯಾನಿಂಗ್ಗಾಗಿ ಖಾಸಗಿ ಕೇಂದ್ರಗಳಿಗೆ ತೆರಳಿ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾದ ಪರಿಸ್ಥಿತಿ ಇತ್ತು. ಇದೀಗ ಆಸ್ಪತ್ರೆಯಲ್ಲಿಯೇ ಈ ಸೌಲಭ್ಯ ದೊರೆಯುವುದರಿಂದ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಈ ಸಮಸ್ಯೆಯನ್ನು ಈ ಹಿಂದೆ ವಿಧಾನಮಂಡಲದ ಅಧಿವೇಶನಗಳಲ್ಲಿ ಹಲವು ಬಾರಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆದಿದ್ದೆ. ಅಂದಿನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಎಂಆರ್ಐ ಯಂತ್ರದ ಅಗತ್ಯವನ್ನು ಮನವರಿಕೆ ಮಾಡಲಾಗಿತ್ತು. ಪ್ರಸ್ತುತ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ವಿಶೇಷ ಕಾಳಜಿ ವಹಿಸಿ ಆಡಳಿತಾತ್ಮಕ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಹಣ ವಸೂಲಿಗೆ ಅವಕಾಶ ನೀಡಬೇಡಿ: ಎಂಆರ್ಐ ಯಂತ್ರವನ್ನು ವಿಶಾಲವಾದ ಸ್ಥಳದಲ್ಲಿ ವೈಜ್ಞಾನಿಕವಾಗಿ ಅಳವಡಿಸಬೇಕು. ಒಂದೇ ಸೂರಿನಡಿ ಎಂಆರ್ಐ, ಸಿಟಿ ಸ್ಕ್ಯಾನ್ ಸೇರಿದಂತೆ ಎಲ್ಲ ರೀತಿಯ ಸ್ಕ್ಯಾನಿಂಗ್ ಹಾಗೂ ಎಕ್ಸ್ರೇ ಸೌಲಭ್ಯಗಳನ್ನು ಕಲ್ಪಿಸಿದರೆ ರೋಗಿಗಳು ಒಂದೆಡೆಯಿಂದ ಮತ್ತೊಂದೆಡೆ ಅಲೆಯುವುದು ತಪ್ಪಲಿದೆ. ಯಾವುದೇ ಕಾರಣಕ್ಕೂ ಎಂಆರ್ಐ ಸ್ಕ್ಯಾನಿಂಗ್ ಹೆಸರಿನಲ್ಲಿ ರೋಗಿಗಳಿಂದ ಅನಧಿಕೃತವಾಗಿ ಹಣ ವಸೂಲಿ ಮಾಡುವ ದಂಧೆಗೆ ಅವಕಾಶ ನೀಡಬಾರದು. ಈ ಕುರಿತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ನಿರ್ದೇಶನ ನೀಡಿದರು.
30 ವೆಂಟಿಲೇಟರ್ಗಳ ವ್ಯವಸ್ಥೆಗೆ ಒತ್ತಾಯ: ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಕೊರತೆಯಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಸಾವಿರಾರು ರೂಪಾಯಿ ವೆಚ್ಚ ಮಾಡಬೇಕಾಗಿದೆ. ಈ ಸಮಸ್ಯೆಯನ್ನೂ ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಆಸ್ಪತ್ರೆಯಲ್ಲಿ ಕನಿಷ್ಠ 25ರಿಂದ 30 ವೆಂಟಿಲೇಟರ್ಗಳನ್ನು ಸಿದ್ಧಪಡಿಸಿ, ಅಗತ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯದ ವ್ಯವಸ್ಥೆ ಕಲ್ಪಿಸಬೇಕು. ಅಲ್ಲದೆ, ಆಸ್ಪತ್ರೆಯಲ್ಲಿ ಸೆಂಟ್ರಲ್ ಲ್ಯಾಬ್ ಸ್ಥಾಪನೆಗೂ ಕ್ರಮ ಕೈಗೊಳ್ಳಬೇಕು. ಇದರಿಂದ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳ ಅವಲಂಬನೆ ತಪ್ಪಿಸಿಕೊಳ್ಳಬಹುದು ಎಂದು ತಿಳಿಸಿದರು.
ರೋಗಿಗಳ ಸೇವೆಯಲ್ಲಿ ನಿರ್ಲಕ್ಷ್ಯ ಸಲ್ಲದು: ಬಳಿಕ ಒಳರೋಗಿಗಳ ವಾರ್ಡ್ಗಳಿಗೆ ಭೇಟಿ ನೀಡಿದ ಸಚಿವರು, ರೋಗಿಗಳ ಆರೋಗ್ಯ ವಿಚಾರಿಸಿ, ಅವರಿಗೆ ನೀಡುತ್ತಿರುವ ಚಿಕಿತ್ಸೆ ಹಾಗೂ ವೈದ್ಯಕೀಯ ಸೌಲಭ್ಯಗಳ ಕುರಿತು ವೈದ್ಯರಿಂದ ಮಾಹಿತಿ ಪಡೆದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿ ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿವೆ. ಸರ್ಕಾರಿ ಆಸ್ಪತ್ರೆಗೆ ಬರುವ ಬಹುತೇಕ ರೋಗಿಗಳು ಆರ್ಥಿಕವಾಗಿ ದುರ್ಬಲರಾಗಿದ್ದು, ಈಗಾಗಲೇ ಸಂಕಷ್ಟದಲ್ಲಿರುತ್ತಾರೆ. ಅಂತಹವರಿಗೆ ಯಾವುದೇ ರೀತಿಯ ಅನ್ಯಾಯ ಅಥವಾ ನಿರ್ಲಕ್ಷ್ಯ ತೋರಬಾರದು. ರೋಗಿಗಳೊಂದಿಗೆ ಮಾನವೀಯತೆಯಿಂದ ನಡೆದುಕೊಂಡು ಉತ್ತಮ ಚಿಕಿತ್ಸೆ ನೀಡಬೇಕು. ನಿಮ್ಮ ಸೇವೆ ರೋಗಿಗಳ ಹೃದಯ ತಟ್ಟಿದಾಗ ಮಾತ್ರ ಕರ್ತವ್ಯ ನಿರ್ವಹಿಸಿದ ತೃಪ್ತಿ ದೊರೆಯುತ್ತದೆ ಎಂದು ವೈದ್ಯರು ಹಾಗೂ ಸಿಬ್ಬಂದಿಗೆ ಕಿವಿಮಾತು ಹೇಳಿದರು.






















