SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಹಾಲಿನ ದರ ಏರಿಕೆ ಖಂಡಿಸಿ ಬ್ಲಾಕ್ ಟೀ ಪ್ರತಿಭಟನೆ

ಹಾಲಿನ ದರ ಏರಿಕೆ ಖಂಡಿಸಿ ಬ್ಲಾಕ್ ಟೀ ಪ್ರತಿಭಟನೆ

0
63

ದಾವಣಗೆರೆ: ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲು, ಮೊಸರು ಸೇರಿದಂತೆ ಹಾಲಿನ ಉತ್ಪನ್ನಗಳ ದರವನ್ನು ಏರಿಸಿರುವುದನ್ನು ಖಂಡಿಸಿ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಮಂಗಳವಾರ ನಗರದಲ್ಲಿ ಬ್ಲಾಕ್ ಟೀ ಕಾಯಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಲಾಯಿತು.

ದಾವಣಗೆರೆಯ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಗಾಂಧಿ ವೃತ್ತದ ಮೂಲಕ ಪಿ.ಬಿ. ರಸ್ತೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಕಚೇರಿಗೆ ತಲುಪಿತು. ಬಳಿಕ ಉಪವಿಭಾಗಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಚೇತನಾ ಶಿವಕುಮಾರ್ ಹಾಗೂ ಉಪಾಧ್ಯಕ್ಷೆ ಎಚ್.ಸಿ. ಜಯಮ್ಮ, ಹಾಲು, ಮೊಸರು, ಪನ್ನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆ ಏರಿಕೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದ್ದು, ಸರ್ಕಾರದ ಕ್ರಮ ಜನವಿರೋಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ತನ್ನ ಖಜಾನೆಯಿಂದ ಹಣ ಖರ್ಚು ಮಾಡದೆ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರೈತರಿಗೆ ಹೆಚ್ಚುವರಿ ಕೃಷಿ ಸಮ್ಮಾನ್ ಅನುದಾನ ಹಾಗೂ ರೈತರ ಮಕ್ಕಳ ವಿದ್ಯಾನಿಧಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದುಗೊಳಿಸಿದೆ ಎಂದು ದೂರಿದರು.

ದಿನಗೂಲಿ ಕಾರ್ಮಿಕರು ದಿನಕ್ಕೆ ಕೇವಲ ₹300 ದುಡಿದರೂ ಅದರಲ್ಲಿ ಅರ್ಧ ಲೀಟರ್ ಹಾಲಿಗೆ ₹50 ಹಾಗೂ ಇತರ ದಿನಬಳಕೆ ವಸ್ತುಗಳಿಗೆ ಹೆಚ್ಚಿನ ಹಣ ವ್ಯಯಿಸಬೇಕಾದ ಪರಿಸ್ಥಿತಿ ಇದೆ. ದಿನಸಿ, ಸಾರಿಗೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ. ಹಾಲಿನ ದರ ಹೆಚ್ಚಳದಿಂದ ಸಾಮಾನ್ಯ ಜನರು ಹಾಲು ಖರೀದಿಸಲಾಗದೆ ಬ್ಲ್ಯಾಕ್ ಟೀ ಕುಡಿಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಪೌಷ್ಟಿಕತೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಮಕ್ಕಳೂ ಸೇರಿದಂತೆ ಎಲ್ಲರಿಗೂ ಅಗತ್ಯವಾಗಿರುವ ಹಾಲಿನ ಬೆಲೆ ಏರಿಸಿರುವುದು ಸರಿಯಲ್ಲ. ಪಂಚ ಗ್ಯಾರಂಟಿ ಯೋಜನೆಗಳಡಿ ನೀಡುವ ₹2,000 ಸಹಾಯಧನ ಸಮರ್ಪಕವಾಗಿ ತಲುಪುತ್ತಿಲ್ಲ. ವೃದ್ಧಾಪ್ಯ ವೇತನವೂ ಫಲಾನುಭವಿಗಳಿಗೆ ಸರಿಯಾಗಿ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಸರ್ಕಾರ ಕೂಡಲೇ ಹಾಲಿನ ದರ ಏರಿಕೆಯನ್ನು ಹಿಂಪಡೆಯುವುದರ ಜತೆಗೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಿಳೆಯರು ಒನಕೆ ಹಿಡಿದು ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಲ್ಲದೆ, ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಣ್ಣೇಶ್, ಧನಂಜಯ, ಆರ್. ಲಕ್ಷ್ಮಣ್, ದಕ್ಷಿಣ ಮಂಡಲ ಅಧ್ಯಕ್ಷ ಮಟ್ಟಿಕಲ್ಲು ಕರಿಬಸಪ್ಪ, ಉತ್ತರ ಮಂಡಲ ಅಧ್ಯಕ್ಷ ತಾರೇಶ್ ನಾಯ್ಕ್, ಮಹಿಳಾ ಮೋರ್ಚಾ ಪದಾಧಿಕಾರಿಗಳಾದ ಕಲಾವತಿ, ಮಮತಾ, ನೀತಾ ನಂದೀಶ್, ಶಾರದಾ ರಾಯ್ಕರ್, ರೇಣುಕಮ್ಮ, ದ್ರಾಕ್ಷಣಮ್ಮ, ಮಾಜಿ ಮೇಯರ್ ಎಸ್.ಟಿ. ವೀರೇಶ್, ಮಾಜಿ ವಿಪಕ್ಷ ನಾಯಕ ಪ್ರಸನ್ನಕುಮಾರ್, ಮಾಜಿ ಅಧ್ಯಕ್ಷರಾದ ಹನಗವಾಡಿ ವೀರೇಶ್, ಯಶವಂತರಾವ್ ಜಾಧವ್, ಲೋಕಿಕೆರೆ ನಾಗರಾಜ್, ಆಲೂರು ನಿಂಗರಾಜ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಆರನೇಕಲ್ಲು ವಿಜಯಕುಮಾರ್ ಸೇರಿದಂತೆ ಬಿಜೆಪಿ ಮಹಿಳಾ ಮತ್ತು ಪುರುಷ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.