ಬೆಂಗಳೂರು: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ಅಂತಿಮ ನಮನ ಸಲ್ಲಿಸಿದರು.
ಭಾನುವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಪದ್ಮನಾಭ ನಗರದ ಗೌಡರ ನಿವಾಸಕ್ಕೆ ತೆರಳಿದ ಸಚಿವರು ಚೆನ್ನಮ್ಮ ದೇವೇಗೌಡರ ಅಂತಿಮ ದರ್ಶನ ಪಡೆದರು. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ನಮನ ಸಲ್ಲಿಸಿದರು. ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಛವಿರಿಸಿ ಕೇಂದ್ರದ ಪರವಾಗಿ ಗೌರವಾರ್ಪಣೆಯೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಇಡೀ ಕುಟುಂಬಕ್ಕೆ ಸ್ಥೈರ್ಯ ಹೇಳಿದರು. ದುಃಖತಪ್ತರೆಲ್ಲರಿಗೂ ಭಗವಂತ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲೆಂದು ಪ್ರಾರ್ಥಿಸಿ, ಮಾಜಿ ಪ್ರಧಾನಿ ಕುಟುಂಬಸ್ಥಿರಿಗೆ, ಅಭಿಮಾನಿಗಳಿಗೆ ಸಾಂತ್ವನ ಹೇಳಿದರು.
ಅಂತಿಮ ನಮನ ಸಲ್ಲಿಸಿ ಬಳಿಕ ಮಾತನಾಡಿದ ಸಚಿವ ಪ್ರಲ್ಹಾದ ಜೋಶಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬಕ್ಕೆ ಒಂದು ಸಾಧನಾ ಶಕ್ತಿಯಾಗಿದ್ದರು. ಸರಳಾತಿ ಸರಳ ವ್ಯಕ್ತಿತ್ವವುಳ್ಳವರಾಗಿದ್ದ ಚೆನ್ನಮ್ಮ ಅವರ ನಿರಾಡಂಬರ ಜೀವನ ಸರ್ವರಿಗೂ ಮಾದರಿಯಾಗಿದೆ ಎಂದು ಸ್ಮರಿಸಿದರು.
ಸಮಾಜಕ್ಕೆ ಆದರ್ಶ ಗೃಹಿಣಿ: ಪತಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಮಕ್ಕಳು ಮಂತ್ರಿ, ಮುಖ್ಯಮಂತ್ರಿ ಆಗಿದ್ದರೂ ಒಬ್ಬ ಸಾಮಾನ್ಯ ಗೃಹಿಣಿಯಾಗಿ ಅತ್ಯಂತ ಸರಳತೆ ಮೆರೆಯುವುದರೊಂದಿಗೆ ಇಂದಿನ ಸಮಾಜಕ್ಕೆ ಆದರ್ಶವಾಗಿದ್ದಾರೆ ಎಂದು ಬಣ್ಣಿಸಿದರು.
ಚೆನ್ನಮ್ಮನವರ ಪಾರ್ಥಿವ ಶರೀರಕ್ಕೆ ಇಂದು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿ ಅಂತಿಮ ನಮನ ಸಲ್ಲಿಸಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿ ಶೃದ್ಧಾಂಜಲಿ ಸಲ್ಲಿಸಿದ್ದಾಗಿ ಹೇಳಿದ ಪ್ರಲ್ಹಾದ ಜೋಶಿ, ಭಗವಂತ ಮೃತರ ಆತ್ಮಕ್ಕೆ ಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.





















