SK Home Ad
Home ನಮ್ಮ ಜಿಲ್ಲೆ ಬೆಂಗಳೂರು ಬಸ್‌ನಲ್ಲಿ ಕಂಡಕ್ಟರ್ ಹಣದ ಬ್ಯಾಗ್ ಕದ್ದು ಸಿಕ್ಕಿಬಿದ್ದ ಮಹಿಳೆಯ ಹೈಡ್ರಾಮಾ

ಬಸ್‌ನಲ್ಲಿ ಕಂಡಕ್ಟರ್ ಹಣದ ಬ್ಯಾಗ್ ಕದ್ದು ಸಿಕ್ಕಿಬಿದ್ದ ಮಹಿಳೆಯ ಹೈಡ್ರಾಮಾ

0
129

ಬೆಂಗಳೂರು: ಪ್ರಯಾಣಿಕಳಂತೆ ಬಿಎಂಟಿಸಿ ಬಸ್‌ಗೆ ಹತ್ತಿದ್ದ ಮಹಿಳೆಯೊಬ್ಬಳು ನಿರ್ವಾಹಕರ ಹಣದ ಬ್ಯಾಗ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

KA-57 F-6331 ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ನಿರ್ವಾಹಕರ ಗಮನ ಬೇರೆಡೆ ಇದ್ದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಮಹಿಳೆ ಹಣದ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಅಡಗಿಸಿಕೊಂಡಿದ್ದಾಳೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಯಾವುದೇ ಅನುಮಾನ ಬಾರದಂತೆ ಬಸ್‌ನಲ್ಲೇ ಸಾಮಾನ್ಯ ಪ್ರಯಾಣಿಕಳಂತೆ ವರ್ತಿಸುತ್ತಿದ್ದಳು.

ಆದರೆ ಮಹಿಳೆಯ ನಡೆ-ನುಡಿಯಲ್ಲಿ ಅನುಮಾನಗೊಂಡ ನಿರ್ವಾಹಕರು ಆಕೆಯನ್ನು ಪ್ರಶ್ನಿಸಿದಾಗ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಮಹಿಳಾ ಪೊಲೀಸ್ ಸಿಬ್ಬಂದಿ ವಿಚಾರಣೆ ನಡೆಸಿದಾಗ, “ನಾನು ಮನೆಗೆ ಹೋಗಬೇಕು, ನನ್ನ ಗಂಡನಿಗೆ ಆರೋಗ್ಯ ಸರಿಯಿಲ್ಲ” ಎಂದು ಹೇಳುತ್ತಾ ಭಾವನಾತ್ಮಕವಾಗಿ ವರ್ತಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ.

ಆದರೆ ಪೊಲೀಸರು ಮಹಿಳೆಯ ಚೀಲವನ್ನು ಪರಿಶೀಲಿಸಿದಾಗ, ಅದರಲ್ಲಿ ನಿರ್ವಾಹಕರ ಹಣದ ಬ್ಯಾಗ್ ಪತ್ತೆಯಾಗಿದೆ. ಬಳಿಕ ಬಸ್ ನಿರ್ವಾಹಕರು ಆರೋಪಿತ ಮಹಿಳೆಯನ್ನು ಪೊಲೀಸರಿಗೆ ಒಪ್ಪಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಬಸ್‌ಗಳು ಹಾಗೂ ಜನಸಂದಣಿ ಪ್ರದೇಶಗಳಲ್ಲಿ ಸರಗಳ್ಳತನ ಮತ್ತು ಪಿಕ್‌ಪಾಕೆಟ್ ಪ್ರಕರಣಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ಹಣ, ಮೊಬೈಲ್ ಹಾಗೂ ಬೆಲೆಬಾಳುವ ವಸ್ತುಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.