SK Home Ad
Home ನಮ್ಮ ಜಿಲ್ಲೆ ಬೆಳಗಾವಿ ನಾಯಿ ಉಳಿಸಲು ಹೋಗಿ ತಾಯಿ ಕಳೆದುಕೊಂಡ ಮಗ

ನಾಯಿ ಉಳಿಸಲು ಹೋಗಿ ತಾಯಿ ಕಳೆದುಕೊಂಡ ಮಗ

0
53

ಬೆಳಗಾವಿ: ಮಗನ ಬೈಕ್ ಹಿಂಬದಿಯಲ್ಲಿ ಕುಳಿತು ಮನೆ ಕಡೆ ಬರುತ್ತಿದ್ದ ತಾಯಿ, ಕ್ಷಣಾರ್ಧದಲ್ಲಿ ನಡೆದ ಅಪಘಾತದಲ್ಲಿ ಮಗನ ಕಣ್ಣೆದುರೇ ಪ್ರಾಣ ಕಳೆದುಕೊಂಡ ಕರುಣಾಜನಕ ಘಟನೆ ಗುರುವಾರ ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದ ಬಳಿ ನಡೆದಿದೆ.

ಮೃತರನ್ನು ಶಾಂತವ್ವ ಕಲ್ಮಠ ಎಂದು ಗುರುತಿಸಲಾಗಿದೆ. ಅವರ ಪುತ್ರ ಮಹಾಂತೇಶ ಕಲ್ಮಠ ಅವರು ತಾಯಿಯನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪಂತ ಬಾಳೇಕುಂದ್ರಿಯಿಂದ ಮಹಾಂತೇಶನಗರ ಕಡೆ ಬರುತ್ತಿದ್ದರು. ಸಾಂಬ್ರಾ ಸಮೀಪ ಬೀದಿ ನಾಯಿ ಅಡ್ಡ ಬಂದಿದೆ. ಪ್ರಾಣಿಯ ಜೀವ ಉಳಿಸಲು ಮಹಾಂತೇಶ ತಕ್ಷಣ ಬ್ರೇಕ್ ಹಾಕಿದಾಗ ರಭಸಕ್ಕೆ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಶಾಂತವ್ವ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಮೃತಪಟ್ಟರು.

ನಾಯಿ ಉಳಿಸಲು ಪ್ರಯತ್ನಿಸಿದ ಮಾನವೀಯತೆ, ತಾಯಿಯ ಜೀವ ಕಳೆದುಕೊಂಡ ದುರಂತಕ್ಕೆ ಕಾರಣವಾಗಿರುವುದು ಘಟನೆಗೆ ಮತ್ತಷ್ಟು ನೋವಿನ ತಿರುವು ನೀಡಿದೆ. ಕ್ಷಣಕಾಲದ ಹಿಂದೆ ಮಗನೊಂದಿಗೆ ಮಾತಾಡುತ್ತಾ ಬರುತ್ತಿದ್ದ ತಾಯಿ, ಮುಂದಿನ ಕ್ಷಣವೇ ಮಾತಿಲ್ಲದ ದೇಹವಾಗಿ ಬಿದ್ದಿರುವ ದೃಶ್ಯ ಸ್ಥಳೀಯರ ಮನ ಕಲುಕಿದೆ. ತಾಯಿಯನ್ನು ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಹೋಗಬೇಕಿದ್ದ ಮಗ, ಅವಳನ್ನು ಉಳಿಸಿಕೊಳ್ಳಲಾಗದೆ ಕಣ್ಣೀರು ಹಾಕುವಂತಾಗಿದೆ.

ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮನೆ ತಲುಪಬೇಕಿದ್ದ ತಾಯಿ ಮಾರ್ಗ ಮಧ್ಯೆಯೇ ಜೀವ ಕಳೆದುಕೊಂಡ ಸುದ್ದಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಬೀದಿ ನಾಯಿಗಳ ಹಾವಳಿಯಿಂದ ರಸ್ತೆ ಸಂಚಾರವೇ ಅಪಾಯಕಾರಿಯಾಗುತ್ತಿರುವುದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ.