ಬೆಂಗಳೂರು: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ʻಬಿಗ್ ಬಾಸ್ ಕನ್ನಡ ಸೀಸನ್-13ʼರ ಬಹುನಿರೀಕ್ಷಿತ ಪ್ರೋಮೊ ಬಿಡುಗಡೆಯಾಗಿದ್ದು, ಹೊಸ ಸೀಸನ್ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಕಿಚ್ಚ ಸುದೀಪ್ ಅವರೇ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದು, ಈ ಬಾರಿ ಶೋನಲ್ಲಿ ಹಲವು ಹೊಸತನಗಳನ್ನು ಪರಿಚಯಿಸಲಾಗುತ್ತಿದೆ.
ಬಿಡುಗಡೆಯಾದ ಪ್ರೋಮೊದಲ್ಲಿ “ನಮಸ್ತೆ ಕರ್ನಾಟಕ, The Bigg Wait is Over!” ಎಂಬ ಸಾಲಿನೊಂದಿಗೆ ಕಿಚ್ಚ ಸುದೀಪ್ ಅದ್ದೂರಿಯಾಗಿ ಎಂಟ್ರಿ ನೀಡುತ್ತಾರೆ. ಬಳಿಕ, “ಕರ್ನಾಟಕದ ಜನ ಯಾವತ್ತೂ ಯಾರಿಗೂ ಕಾದಿದ್ದು ಚರಿತ್ರೆಯಲ್ಲೇ ಇಲ್ಲ. ಆದರೆ ವರ್ಷಕ್ಕೆ ಒಂದು ಸಲ ಕಾಯ್ತಾರೆ. ಒಂದೇ ಮನೆ, ಒಂದು ಅವಕಾಶ, ಕೋಟಿ ಕನಸುಗಳು… ಮತ್ತೆ ಶುರು ಮಾಡೋಣ್ವಾ?” ಎಂಬ ಅವರ ಡೈಲಾಗ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಈ ಬಾರಿಯ ‘ಬಿಗ್ ಬಾಸ್’ ಹಿಂದಿನ ಸೀಸನ್‌ಗಳಿಗಿಂತ ಭಿನ್ನವಾಗಿರಲಿದೆ. ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಮನೆಯೊಳಗೆ ಪ್ರವೇಶಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಶೋಗೆ ಹೊಸ ಆಯಾಮ ಸಿಗಲಿದೆ. ಈಗಾಗಲೇ ಈ ಘೋಷಣೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಯಾರು ಸ್ಪರ್ಧಿಗಳಾಗಲಿದ್ದಾರೆ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಪ್ರೋಮೊ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಿಚ್ಚ ಸುದೀಪ್ ಅವರ ಸ್ಟೈಲ್, ಸಂಭಾಷಣೆ ಮತ್ತು ಹೊಸ ಪರಿಕಲ್ಪನೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಾರಿ ಮನೆಯಲ್ಲಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಸ್ಪರ್ಧಿಗಳ ನಡುವಿನ ಪೈಪೋಟಿ ಹೇಗಿರಲಿದೆ ಎಂಬುದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಲಿದೆ.
ಇನ್ನೂ ಶೋ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯಂದೇ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಜತೆಗೆ ಸ್ಪರ್ಧಿಗಳ ಹೆಸರುಗಳು ಕೂಡ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇದೆಲ್ಲದರ ಕುರಿತು ಅಧಿಕೃತ ಪಟ್ಟಿಯನ್ನು ವಾಹಿನಿ ಇದುವರೆಗೂ ಪ್ರಕಟಿಸಿಲ್ಲ. ಆದರೆ ಪ್ರೋಮೊ ಬಿಡುಗಡೆಯಾದ ಬೆನ್ನಲ್ಲೇ ʻಬಿಗ್ ಬಾಸ್ ಕನ್ನಡ-13ʼ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್ ಆಗಿದ್ದು, ಶೀಘ್ರದಲ್ಲೇ ಪ್ರಸಾರದ ದಿನಾಂಕವನ್ನು ಪ್ರಕಟಿಸುವ ಸಾಧ್ಯತೆಯಿದೆ.






















