ಶಿವಮೊಗ್ಗ: ಮನೆ ಮೇಲೆ ಗುಡ್ಡ ಕುಸಿದು ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ದುರ್ಘಟನೆ ತೀರ್ಥಹಳ್ಳಿ ಪಟ್ಟಣದ ಗಾಂಧಿನಗರದಲ್ಲಿ ಭಾನುವಾರ ಬೆಳಗಿನ ಜಾವ ಸಂಭವಿಸಿದೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಕಕ್ಕರಗೊಳ ಗ್ರಾಮದ ಮಲ್ಲಿಕಾರ್ಜುನ (30), ಪತ್ನಿ ನಾಗವೇಣಿ (25) ಹಾಗೂ ದಂಪತಿಯ ಮಗ ಸಂತೋಷ್ (4) ಮೃತಪಟ್ಟವರು. ರಾತ್ರಿ ಮಲಗಿದ್ದಾಗ ಮನೆ ಮೇಲೆ ಗುಡ್ಡ ಕುಸಿದಿದೆ. ಗಾಯಗೊಂಡ ಹನುಮಂತ ಎಂಬುವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಇವರೆಲ್ಲರೂ ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸಕ್ಕೆಂದು ತೀರ್ಥಹಳ್ಳಿ ಪಟ್ಟಣಕ್ಕೆ ಬಂದ ಕಾರ್ಮಿಕರಾಗಿದ್ದಾರೆ. ಎರಡು ದಿನಗಳಿಂದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಬಂಡೆಯ ಮೇಲಿನ ಮಣ್ಣು ಜರುಗಿ ಕಾರ್ಮಿಕರು ವಾಸವಾಗಿದ್ದ ಶೆಡ್ ಮೇಲೆ ಕುಸಿದಿದೆ. ಗಾಢ ನಿದ್ರೆಯಲ್ಲಿದ್ದಾಗಲೇ ಏಕಾಏಕಿ ಗುಡ್ಡ ಕುಸಿದಿದ್ದು, ಒಟ್ಟು 25 ಕಾರ್ಮಿಕರು ಶೆಡ್‌ನಲ್ಲಿ ಇದ್ದು, 21 ಜನರನ್ನು ರಕ್ಷಣೆ ಮಾಡಲಾಗಿದೆ.
ಸ್ಥಳಕ್ಕೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಸ್ತೆ ಕಿರಿದಾಗಿದ್ದರಿಂದ ಜೆಸಿಬಿ ವಾಹನಗಳು ದುರಂತ ಸ್ಥಳಕ್ಕೆ ತೆರಳಲು ಆಗದೆ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು.






















