ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಉಗ್ರ ಲತೀಫ್ ಭಟ್ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ನವೆಂಬರ್ 11ರಂದು ಸಿಆರ್‌ಪಿಎಫ್ ಚೆಕ್‌ಪಾಯಿಂಟ್ ಬಳಿ ಭದ್ರತಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದ ಈತನಿಗಾಗಿ ಕಳೆದ ಏಳು ದಿನಗಳಿಂದ ತೀವ್ರ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು.
ದೇವಸಾರ್ ಪ್ರದೇಶದ ಜಂಗಲ್‌ಪೊರಾ ಗ್ರಾಮದ ಮಸೀದಿಯೊಂದರಲ್ಲಿ ಲತೀಫ್ ಭಟ್ ಅಡಗಿರುವ ಬಗ್ಗೆ ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಸಿಆರ್‌ಪಿಎಫ್, ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಎಲೈಟ್ ಆಪರೇಷನ್ಸ್ ಗ್ರೂಪ್ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮಸೀದಿಯನ್ನು ಸುತ್ತುವರಿದಿದ್ದರು.
ಬುಧವಾರ ಬೆಳಗಿನ ಜಾವ 2.45ರ ಸುಮಾರಿಗೆ ಕಾರ್ಯಾಚರಣೆ ಆರಂಭವಾಗಿತ್ತು. ಈ ವೇಳೆ ಭದ್ರತಾ ಸಿಬ್ಬಂದಿ ಲತೀಫ್‌ಗೆ ಶರಣಾಗುವಂತೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ವಿಡಿಯೋ ಕಾಲ್ ಮೂಲಕವೂ ಶರಣಾಗುವಂತೆ ಮನವಿ ಮಾಡಲಾಗಿತ್ತು. ಆದರೆ, ಆತ ಅದಕ್ಕೆ ಒಪ್ಪದೆ ಭದ್ರತಾ ಸಿಬ್ಬಂದಿ ಮೇಲೆಯೇ ಗುಂಡು ಹಾರಿಸಿದ್ದಾನೆ. ಇದರಿಂದ ಉಭಯ ಕಡೆಯಿಂದ ಗುಂಡಿನ ಚಕಮಕಿ ನಡೆದಿದ್ದು, ಅಂತಿಮವಾಗಿ ಲತೀಫ್ ಭಟ್ ಹತನಾಗಿದ್ದಾನೆ.
ಕಳೆದ ಏಳು ದಿನಗಳಿಂದ ನಡೆದ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 500 ಜನರನ್ನು ವಿಚಾರಣೆಗೊಳಪಡಿಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆ ಕೊನೆಗೂ ಯಶಸ್ವಿಯಾಗಿದೆ. ಈ ಮೂಲಕ ಕಾಶ್ಮೀರದಲ್ಲಿ ಉಳಿದಿದ್ದ ಕೊನೆಯ ಉಗ್ರನ ಅಂತ್ಯವಾಗಿದೆ.






















