ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿರುವ ದೂರಿನ ಹಿನ್ನೆಲೆಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ನಗರ ಸಾರಿಗೆ 1ನೇ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚಾಲಕ ಕಂ ನಿರ್ವಾಹಕ ಷಡಕ್ಷರಯ್ಯ ಹತ್ತಿಕಟ್ಟಿಮಠ ಮನೆ ಮೇಲೆ ಬುಧವಾರ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗೋಕುಲ ರಸ್ತೆಯ ಡಾ.ಆರ್.ಎಂ. ಲೋಹಿಯಾ ನಗರದಲ್ಲಿರುವ ಷಡಕ್ಷರಯ್ಯ ಅವರಿಗೆ ಸೇರಿದ ಮೂರು ಮನೆ ಹಾಗೂ ಇವರ ಸ್ವಂತ ಊರಾದ ಹಾವೇರಿ ಜಿಲ್ಲೆಯ ಹಿರೇಬೂದಿಹಾಳದ ಮನೆ ಮೇಲೆ ಸುಮಾರು 20ಕ್ಕೂ ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ದಾಳಿ ನಡೆದಿದ್ದು, ಸುಮಾರು 5 ಗಂಟೆಗೂ ಹೆಚ್ಚು ಸಮಯ ದಾಖಲೆಗಳನ್ನು ಪರಿಶೀಲಿಸಲಾಗಿದೆ.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಆದಾಯಕ್ಕೂ ಮೀರಿ ಆಸ್ತಿ ಅಸಮತೋಲನ ಹಾಗೂ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಪಟ್ಟಂತೆ ಹಲವು ಮಹತ್ವದ ದಾಖಲೆ ಹಾಗೂ ಚರ-ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ, ಸೂಕ್ತ ಆದಾಯದ ಮೂಲ ನೀಡುವಂತೆ ನೋಟಿಸ್ ನೀಡಿದ್ದಾರೆ.
ಸರ್ಕಾರಿ ನೌಕರಿಯಲ್ಲಿರುವ ಅದರಲ್ಲೂ ಸರಿಯಾದ ಸಮಯಕ್ಕೆ ವೇತನ ನೀಡದ ಸಾರಿಗೆ ಸಂಸ್ಥೆಯಲ್ಲಿ ಸಾಧಾರಣ ಹುದ್ದೆಯಲ್ಲಿರುವ ಹಾಗೂ ಪೂರ್ವಜರ ಆಸ್ತಿಯೂ ಇಲ್ಲದ ಷಡಕ್ಷರಯ್ಯ ಹತ್ತಿಕಟ್ಟಿಮಠ ಅವರು ಮೂರು ಮೂರು ಸ್ವಂತ ಮನೆಗಳನ್ನು ಹೇಗೆ ಹೊಂದಿದ್ದಾರೆ? ಹಲವು ಭೂಮಿಯನ್ನು ಖರೀದಿಸಿದ್ದು ಹೇಗೆ? ಒಂದು ವೇಳೆ ರಿಯಲ್ ಎಸ್ಟೇಟ್ ಉದ್ಯಮದಿಂದ ಹಣ ಲಭ್ಯವಾಗಿದೆ ಎಂದಾದರೆ ಆದಾಯ ತೆರಿಗೆ ಭರಣ ಆಗಿದೆಯೇ? ಸರ್ಕಾರಿ ನೌಕರ ಬೇರೆ ಉದ್ಯೋಗ ಮಾಡಲು ಹೇಗೆ ಸಾಧ್ಯವೇ? ಎಂಬೆಲ್ಲ ಆಯಾಮಗಳಲ್ಲಿ ಲೋಕಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.





















