ದಾವಣಗೆರೆ: ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಕುರ್ಚಿಗಾಗಿ ಕೆಲವು ಮಹಿಳಾ ಕಾರ್ಯಕರ್ತೆಯರ ನಡುವೆ ನಡೆದ ಮಾತಿನ ಚಕಮಕಿ ಹಾಗೂ ಗಲಾಟೆ ಕೆಲಕಾಲ ವೇದಿಕೆಯಲ್ಲಿ ಮುಜುಗರದ ವಾತಾವರಣ ಸೃಷ್ಟಿಸಿತು.
ಸಚಿವ ರಿಜ್ವಾನ್ ಹರ್ಷದ್ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯರು ಕುರ್ಚಿಗಾಗಿ ವಾಗ್ವಾದಕ್ಕಿಳಿದರು. ಇದನ್ನು ಗಮನಿಸಿದ ಸಚಿವರು, ಗಲಾಟೆ ಮಾಡದೆ ಸಮಾಧಾನದಿಂದ ಕುಳಿತುಕೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ಸಚಿವ ಕೆ.ಎಸ್. ಬಸವಂತಪ್ಪ ಅವರೂ ಎದ್ದು ಬಂದು, ಸಚಿವರು ಮಾತನಾಡುತ್ತಿದ್ದಾರೆ, ಗಲಾಟೆ ಮಾಡಬೇಡಿ ಎಂದು ತಿಳಿಹೇಳಿದರು. ಬಳಿಕ ಮಹಿಳಾ ಕಾರ್ಯಕರ್ತೆಯರು ಸುಮ್ಮನಾದರು.
ನಂತರ ಮಾತನಾಡಿದ ಶಾಸಕ ಡಿ.ಜಿ. ಶಾಂತನಗೌಡ ಅವರು, “ಇಲ್ಲಿ ಮಹಿಳೆಯರು ಕುಳಿತುಕೊಳ್ಳಲು ಕುರ್ಚಿಗಾಗಿ ಗಲಾಟೆ ಮಾಡಿದರು. ನಾವು ವಿಧಾನಸೌಧದಲ್ಲಿ ಕುರ್ಚಿಗಾಗಿ ಗಲಾಟೆ ಮಾಡುತ್ತೇವೆ. ಅಂತಹ ಸಂದರ್ಭ ಇಲ್ಲಿಯೂ ಕಂಡುಬಂತು” ಎಂದು ಮಾರ್ಮಿಕವಾಗಿ ಹೇಳಿ ಸಭಿಕರಲ್ಲಿ ನಗೆ ಚಟಾಕಿ ಹಾರಿಸಿದರು.





















