Home Advertisement
Home ಸುದ್ದಿ ರಾಜ್ಯ ರಾಜ್ಯದ ಹಸಿರು ಸಂರಕ್ಷಣೆಗೆ ಹೊಸ ಸಂಕಲ್ಪ ಘೋಷಿಸಿದ ಸರ್ಕಾರ

ರಾಜ್ಯದ ಹಸಿರು ಸಂರಕ್ಷಣೆಗೆ ಹೊಸ ಸಂಕಲ್ಪ ಘೋಷಿಸಿದ ಸರ್ಕಾರ

0
58

ಮಲೆನಾಡು ಮರಗಂತಿ ಕಪ್ಪೆಗೆ ರಾಜ್ಯ ಉಭಯಜೀವಿ ಸ್ಥಾನಮಾನ ನೀಡಲು ಕ್ರಮ – ತುಡುವೆ ಜೇನು ರಾಜ್ಯ ಕೀಟವಾಗುವ ಸಾಧ್ಯತೆ

ಬೆಂಗಳೂರು: ಜೀವವೈವಿಧ್ಯ ಸಂರಕ್ಷಣೆ ಹಾಗೂ ಪರಿಸರ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು, ತುಡುವೆ ಜೇನು (Apis cerana) ಅನ್ನು ರಾಜ್ಯ ಕೀಟವಾಗಿ ಹಾಗೂ ಮಲೆನಾಡಿನ ಮರಗಂತಿ ಕಪ್ಪೆ (Malabar Tree Toad) ಅನ್ನು ರಾಜ್ಯ ಉಭಯಜೀವಿಯಾಗಿ ಘೋಷಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: SBI ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಇಲ್ಲ – ಮುಷ್ಕರ ಮುಂದೂಡಿಕೆ

ಅಪರೂಪದ ಜೀವಜಾತಿಗಳ ಸಂರಕ್ಷಣೆಗೆ ಒತ್ತು : ನಮ್ಮ ನಾಡಿನ ಅಪರೂಪದ ಜೀವಜಾತಿಗಳನ್ನು ಉಳಿಸಿ ಬೆಳೆಸುವ ಈ ಕ್ರಮ ಪರಿಸರ ಸಂರಕ್ಷಣೆಯತ್ತ ಮಹತ್ವದ ಹೆಜ್ಜೆಯಾಗಲಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ. “ಪ್ರಕೃತಿ ಮತ್ತು ಜೀವವೈವಿಧ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೆ ಹಸಿರು ಮತ್ತು ಆರೋಗ್ಯಕರ ಕರ್ನಾಟಕವನ್ನು ನೀಡುವ ಸಂಕಲ್ಪದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ಅವರು ತಿಳಿಸಿದ್ದಾರೆ.

ವಿಶ್ವ ಜೀವವೈವಿಧ್ಯ ದಿನದ ಕಾರ್ಯಕ್ರಮ : ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಿನ್ನೆ ನಡೆದ ವಿಶ್ವ ಜೀವವೈವಿಧ್ಯ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ವಿವಿಧ ದೇಶಗಳು ಮತ್ತು ರಾಜ್ಯಗಳು ಜೀವವೈವಿಧ್ಯ ಸಂರಕ್ಷಣೆಯ ಮಹತ್ವವನ್ನು ಸಾರಲು ರಾಷ್ಟ್ರೀಯ ಪಕ್ಷಿ, ರಾಷ್ಟ್ರೀಯ ಪ್ರಾಣಿ ಹಾಗೂ ರಾಷ್ಟ್ರೀಯ ವೃಕ್ಷಗಳನ್ನು ಘೋಷಿಸುವ ಪರಂಪರೆ ಹೊಂದಿವೆ ಎಂದು ಹೇಳಿದರು.

ಇದನ್ನೂ ಓದಿ: ಶಿಕ್ಷಣ ಸಚಿವರ ರಾಜೀನಾಮೆ ಒತ್ತಾಯಿಸಿ ‘ಕಾಕ್ರೋಚ್’ Digital ಚಳವಳಿ

ಈಗಾಗಲೇ ಘೋಷಿಸಿರುವ ರಾಜ್ಯ ಸಂಕೇತಗಳು : ಕರ್ನಾಟಕ ಸರ್ಕಾರ ಈಗಾಗಲೇ ಶ್ರೀಗಂಧವನ್ನು ರಾಜ್ಯ ವೃಕ್ಷವಾಗಿ, ಆನೆಯನ್ನು ರಾಜ್ಯ ಪ್ರಾಣಿಯಾಗಿ ಹಾಗೂ ನೀಲಕಂಠ ಪಕ್ಷಿಯನ್ನು ರಾಜ್ಯ ಪಕ್ಷಿಯಾಗಿ ಘೋಷಿಸಿದೆ. ಇದಲ್ಲದೆ, ಹಳದಿ-ಕೆಂಪು ಬಣ್ಣದ ರೆಕ್ಕೆಗಳನ್ನು ಹೊಂದಿರುವ ದೊಡ್ಡ ಚಿಟ್ಟೆ ‘ಸದರ್ನ್ ಬರ್ಡ್‌ವಿಂಗ್’ (Southern Birdwing – Troides minos) ಅನ್ನು ರಾಜ್ಯ ಚಿಟ್ಟೆಯಾಗಿ ಘೋಷಿಸಲಾಗಿದೆ ಎಂದು ಸಚಿವರು ವಿವರಿಸಿದರು.

ಅರಣ್ಯ ಭೂಮಿ ಮರು ವಶಕ್ಕೆ ಹೋರಾಟ : ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಎಚ್‌ಎಂಟಿ, ಭಾರತೀಯ ವಾಯುಪಡೆ ಮತ್ತು ಖಾಸಗಿ ರಬ್ಬರ್ ತೋಟ ಕಂಪನಿಗಳ ವಶದಲ್ಲಿರುವ ಸುಮಾರು ₹50 ಸಾವಿರ ಕೋಟಿ ಮೌಲ್ಯದ ಅರಣ್ಯ ಭೂಮಿಯನ್ನು ಮರಳಿ ಪಡೆಯಲು ಸರ್ಕಾರ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ: KEA ಮಹತ್ವದ ಸೂಚನೆ: CBSE, CISCE ವಿದ್ಯಾರ್ಥಿಗಳಿಗೆ ಅಂಕ ದೃಢೀಕರಣ ಅವಕಾಶ

ಹಸಿರು ಹೊದಿಕೆ ರಕ್ಷಣೆ ಹಾಗೂ ಅರಣ್ಯ ಸಂವರ್ಧನೆಗಾಗಿ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಈ ಘೋಷಣೆ ಪರಿಸರವಾದಿಗಳು ಮತ್ತು ಜೀವವೈವಿಧ್ಯ ತಜ್ಞರಿಂದ ಸ್ವಾಗತಕ್ಕೆ ಪಾತ್ರವಾಗಿದ್ದು, ಕರ್ನಾಟಕದ ಅಪರೂಪದ ಜೀವಜಾತಿಗಳಿಗೆ ಇನ್ನಷ್ಟು ಸಂರಕ್ಷಣೆ ದೊರೆಯುವ ನಿರೀಕ್ಷೆ ಮೂಡಿಸಿದೆ.