Home Advertisement
Home ನಮ್ಮ ಜಿಲ್ಲೆ ಉತ್ತರ ಕನ್ನಡ ಬಂಗಾರ ಸಿಗದ್ದಕ್ಕೆ ಸಿಲಿಂಡರ್ ಹೊತ್ತೊಯ್ದ ಕಳ್ಳರು

ಬಂಗಾರ ಸಿಗದ್ದಕ್ಕೆ ಸಿಲಿಂಡರ್ ಹೊತ್ತೊಯ್ದ ಕಳ್ಳರು

0
14

ಕಾರವಾರ: ಕಳ್ಳತನ ಮಾಡಲು ಮನೆಗೆ ನುಗ್ಗಿದ್ದ ಕಳ್ಳರು ಬಂಗಾರ ಸಿಗದ್ದಕ್ಕೆ ಅಡುಗೆ ಅನಿಲದ ತುಂಬಿದ ಸಿಲಿಂಡರ್ ಕದ್ದೊಯ್ದ ಘಟನೆ ತಾಲೂಕಿನ ಅಮುದಳ್ಳಿ ಗ್ರಾಮದಲ್ಲಿ ನಡೆದಿದೆ.

ರೇಷ್ಮಾ ನಾಯ್ಕ ಎಂಬುವವರ ಮನೆಯಲ್ಲಿ ಈ ವಿಚಿತ್ರ ಕಳ್ಳತನ ನಡೆದಿದೆ. ಮನೆಯವರು ಎರಡು ದಿನಗಳ ಕಾಲ ಹೊರಗಡೆ ತೆರಳಿದ್ದ ಸಂದರ್ಭವನ್ನು ಗಮನಿಸಿ ಸಂಚು ರೂಪಿಸಿದ್ದ ದುಷ್ಕರ್ಮಿಗಳು, ಮನೆಯ ಸೆಂಟ್ರಲ್ ಲಾಕ್ ಮುರಿದು ಒಳನುಗ್ಗಿದ್ದಾರೆ.

ಹಣ ಹಾಗೂ ಬಂಗಾರಕ್ಕಾಗಿ ಇಡೀ ಮನೆಯನ್ನು ಜಾಲಾಡಿದ್ದಾರೆ. ಕಪಾಟು ಮತ್ತು ಲಾಕರ್ ಆಯ್ದು ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಆದರೆ, ಮನೆಯಲ್ಲಿ ಹೆಚ್ಚಿನ ಹಣ ಅಥವಾ ಚಿನ್ನಾಭರಣ ಸಿಗದಿದ್ದಾಗ ನಿರಾಶೆಗೊಂಡ ಕಳ್ಳರು, ಕೊನೆಗೆ ಅಡುಗೆ ಮನೆಗೆ ನುಗ್ಗಿ ಅಲ್ಲಿದ್ದ ಅಡುಗೆ ಅನಿಲ ಸಿಲಿಂಡರನ್ನೇ ಹೊತ್ತೊಯ್ದಿದ್ದಾರೆ.

ಮೂರನೇ ದಿನ ಮನೆಯವರು ಮರಳಿ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಬಾಗಿಲು ಮುರಿದಿರುವುದನ್ನು ಕಂಡು ಆತಂಕಗೊಂಡ ಮಾಲೀಕರು ಒಳಗೆ ಪರಿಶೀಲಿಸಿದಾಗ, ಬೆಲೆಬಾಳುವ ವಸ್ತುಗಳ ಬದಲಿಗೆ ಸಿಲಿಂಡರ್ ನಾಪತ್ತೆಯಾಗಿರುವುದು ಕಂಡುಬಂದಿದೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಿಲಿಂಡರ್ ಕೂಡ ಕಳ್ಳತನವಾಗುತ್ತಿರುವುದು ಜನರಲ್ಲಿ ಆತಂಕ ದುಪ್ಪಟ್ಟು ಮಾಡಿದೆ. ಈ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.