Home Advertisement
Home ನಮ್ಮ ಜಿಲ್ಲೆ ವಿಜಯನಗರ ಟ್ರ್ಯಾಕ್ಟರ್ ಪಲ್ಟಿ: ಆರು ಜನ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

ಟ್ರ್ಯಾಕ್ಟರ್ ಪಲ್ಟಿ: ಆರು ಜನ ಸಾವು, 10ಕ್ಕೂ ಹೆಚ್ಚು ಜನರಿಗೆ ಗಾಯ

0
181

ವಿಜಯನಗರ: ಜಿಲ್ಲೆಯ ಟಿಬಿ ಡ್ಯಾಂ ಸಮೀಪ ಸಂಭವಿಸಿದ ಭೀಕರ ಟ್ರ್ಯಾಕ್ಟರ್ ಪಲ್ಟಿ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.

ಸಂಡೂರು ತಾಲೂಕಿನ ಯಶವಂತನಗರ ಹಾಗೂ ಕೂಡ್ಲಿಗಿ ತಾಲೂಕಿನ ಮರ್ಲಾಯನಹಳ್ಳಿ ಗ್ರಾಮದ ನಿವಾಸಿಗಳು ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಕೆಂಚಪ್ಪ (35), ಮಹಾಂತೇಶ್ (18), ಭರತ್ (1), ಸವಿತಾ (12), ಮಾರೇಶ್ ಹಾಗೂ ಗೌರಮ್ಮ ಎಂದು ಗುರುತಿಸಲಾಗಿದೆ.

ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದವರು ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾದ ಪರಿಣಾಮ ರಸ್ತೆ ಬದಿಗೆ ಎಸೆಯಲ್ಪಟ್ಟಿದ್ದು, ಕೆಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ತಕ್ಷಣವೇ ಹೊಸಪೇಟೆ ಹಾಗೂ ಕೊಪ್ಪಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದುರ್ಘಟನೆಯ ಬಳಿಕ ಹೊಸಪೇಟೆ ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಮನಕಲಕುವ ದೃಶ್ಯಗಳು ಕಂಡುಬಂದವು. ಹೆಂಡತಿ ಹಾಗೂ ಮಗನನ್ನು ಕಳೆದುಕೊಂಡು ಗಂಡ ಮಲ್ಲೇಶ್ ಮತ್ತು ಮಗ ಶೋಕದಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಆಕ್ರಂದನ ಮಾಡುತ್ತಿರುವ ದೃಶ್ಯ ಅಲ್ಲಿದ್ದವರ ಕಣ್ಣೀರಾಗುವಂತೆ ಮಾಡಿತು.

ಘಟನೆಯ ಮಾಹಿತಿ ತಿಳಿದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್. ಅರಸಿದ್ದಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.