SK Home Ad
Home ನಮ್ಮ ಜಿಲ್ಲೆ ವಿಜಯನಗರ ಹೊಸಪೇಟೆಯಲ್ಲಿ ಅ. 31ರಿಂದ 19ನೇ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಹೊಸಪೇಟೆಯಲ್ಲಿ ಅ. 31ರಿಂದ 19ನೇ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

0
64
ಹೊಸಪೇಟೆಯಲ್ಲಿ ಅ. 31ರಿಂದ 19ನೇ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಪ್ರತಿ ಮನೆ-ಮನದಲ್ಲಿ ಗೀತೆ ಬೆಳಗಲಿ: 19ನೇ ಶ್ರೀ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ

ಹೊಸಪೇಟೆ: ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಆಯೋಜಿಸಿರುವ 19ನೇ ಶ್ರೀ ಭಗವದ್ಗೀತಾ ಅಭಿಯಾನ-2026ಕ್ಕೆ ಅಕ್ಟೋಬರ್ 31ರಂದು ಹೊಸಪೇಟೆಯಲ್ಲಿ ಚಾಲನೆ ದೊರೆಯಲಿದೆ ಎಂದು ಅಭಿಯಾನ ಸಮಿತಿಯ ಅಧ್ಯಕ್ಷ ಪಿ.ಡಿ. ಗೌತಮ್ ತಿಳಿಸಿದರು.

ಹೊಸಪೇಟೆಯ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2007ರಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಆರಂಭವಾದ ಭಗವದ್ಗೀತಾ ಅಭಿಯಾನವು ಕಳೆದ 18 ವರ್ಷಗಳಿಂದ ರಾಜ್ಯಾದ್ಯಂತ ನಿರಂತರವಾಗಿ ನಡೆಯುತ್ತಿದೆ. ವ್ಯಕ್ತಿತ್ವ ವಿಕಸನ, ನೈತಿಕತೆಯ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರೀಯ ಭಾವೈಕ್ಯತೆ ಎಂಬ ನಾಲ್ಕು ಧ್ಯೇಯಗಳೊಂದಿಗೆ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದರು.

ಈ ವರ್ಷದ ಅಭಿಯಾನದಲ್ಲಿ ಭಗವದ್ಗೀತೆಯ ಎರಡನೇ ಅಧ್ಯಾಯವಾದ ‘ಸಾಂಖ್ಯಯೋಗ’ವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ” — ಹೃದಯದ ದೌರ್ಬಲ್ಯವನ್ನು ತ್ಯಜಿಸಿ ಎದ್ದು ನಿಲ್ಲು ಎಂಬುದು ಈ ವರ್ಷದ ಘೋಷವಾಕ್ಯವಾಗಿದೆ.

ವಿಜಯನಗರ ಜಿಲ್ಲೆಯಲ್ಲಿ ರಾಜ್ಯಮಟ್ಟದ ಉದ್ಘಾಟನಾ ಕಾರ್ಯಕ್ರಮವು ಅಕ್ಟೋಬರ್ 31ರ ಶನಿವಾರ ಸಂಜೆ 4 ಗಂಟೆಗೆ ಹೊಸಪೇಟೆಯ ಹೋಟೆಲ್ ಮಲ್ಲಿಗಿ ವೈಭವಂ ಸಭಾಂಗಣದಲ್ಲಿ ನಡೆಯಲಿದೆ. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಹೊಸಪೇಟೆಯ ಶ್ರೀ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ತೆರಿನಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಹಾಗೂ ಹಂಸಾಂಬಾಶ್ರಮದ ಶ್ರೀ ಪ್ರಮೋದಾಮಯಿ ಮಾತಾಜಿ ಸಾನ್ನಿಧ್ಯ ವಹಿಸಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಸಚಿವ ಕೆ.ಎಸ್. ಬಸವಂತಪ್ಪ, ಶಾಸಕ ಎಚ್.ಆರ್. ಗವಿಯಪ್ಪ, ಸಂಸದ ಈ. ತುಕಾರಾಮ ಹಾಗೂ ನಗರಸಭಾಧ್ಯಕ್ಷ ಎನ್. ರೂಪೇಶ್ ಕುಮಾರ್ ಭಾಗವಹಿಸಲಿದ್ದಾರೆ. ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಅಧ್ಯಕ್ಷ ಸತೀಶ್ ಹೆಗಡೆ, ಅಭಿಯಾನದ ಗೌರವಾಧ್ಯಕ್ಷ ಎ. ಶೀನಭಟ್ ಹಾಗೂ ಅಧ್ಯಕ್ಷ ಪಿ.ಡಿ. ಗೌತಮ್ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.

ಡಿಸೆಂಬರ್ 19ರವರೆಗೆ ವಿವಿಧ ಹಂತಗಳಲ್ಲಿ ಅಭಿಯಾನ : ಅಭಿಯಾನದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ರಾಘವೇಂದ್ರ ಆಚಾರ್ ಮಾತನಾಡಿ, ನವೆಂಬರ್ 2ರಿಂದ 9ರವರೆಗೆ ಮೊದಲ ಹಂತ, ನವೆಂಬರ್ 12ರಿಂದ 19ರವರೆಗೆ ಎರಡನೇ ಹಂತ, ನವೆಂಬರ್ 21ರಿಂದ 28ರವರೆಗೆ ಮೂರನೇ ಹಂತ, ನವೆಂಬರ್ 30ರಿಂದ ಡಿಸೆಂಬರ್ 7ರವರೆಗೆ ನಾಲ್ಕನೇ ಹಂತ ಹಾಗೂ ಡಿಸೆಂಬರ್ 9ರಿಂದ 16ರವರೆಗೆ ಐದನೇ ಹಂತದ ಅಭ್ಯಾಸ ವರ್ಗಗಳು ನಡೆಯಲಿವೆ. ಡಿಸೆಂಬರ್ 18 ಮತ್ತು 19ರಂದು ರಾಜ್ಯಮಟ್ಟದ ಮಹಾಸಮರ್ಪಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜಿಲ್ಲೆಯ ಪ್ರತಿ ತಾಲೂಕು, ಗ್ರಾಮ, ದೇವಸ್ಥಾನ ಹಾಗೂ ಶಾಲೆಗಳಲ್ಲಿ ಭಗವದ್ಗೀತೆಯ ಶ್ಲೋಕ ಕೇಂದ್ರಗಳನ್ನು ಆರಂಭಿಸಲಾಗುತ್ತದೆ. ಪ್ರತಿ ಕೇಂದ್ರದಲ್ಲಿ ಕನಿಷ್ಠ ಎಂಟು ದಿನಗಳ ಕಾಲ ಪ್ರತಿದಿನ ಶ್ಲೋಕ ಪಠಣ ಮತ್ತು ಉಪನ್ಯಾಸಗಳು ನಡೆಯಲಿವೆ. ಗೀತಾ ಜಯಂತಿಯಂದು ಸಮಗ್ರ ಭಗವದ್ಗೀತಾ ಪಠಣವನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.

ಪ್ರತಿ ಮನೆ-ಮನದಲ್ಲಿ ಗೀತೆ ಬೆಳಗಬೇಕು, ಪ್ರತಿಯೊಬ್ಬರ ಬಾಯಲ್ಲಿ ಗೀತೆಯ ಶ್ಲೋಕಗಳು ಮೊಳಗಬೇಕು ಎಂಬುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಕಾರ್ಯಾಧ್ಯಕ್ಷ ಅನಂತ ಜೋಶಿ, ಕೋಶಾಧ್ಯಕ್ಷ ಅಶೋಕ್ ಜಿರೆ, ಉಪಾಧ್ಯಕ್ಷ ರಮೇಶ್ ಗುಪ್ತಾ, ಕಾರ್ಯದರ್ಶಿ ಭೂಪಾಳ ಶ್ರೀಪಾದ್, ಪ್ರಧಾನ ಸಂಚಾಲಕ ಎಚ್.ಪಿ. ಕಲ್ಲಂಭಟ್, ಮಠದ ಸಮನ್ವಯಾಧಿಕಾರಿ ವೆಂಕಟರಮಣ ಹೆಗಡೆ, ತಾಲೂಕು ಸಮಿತಿ ಅಧ್ಯಕ್ಷ ಸಂದೀಪ್ ಸಿಂಗ್, ಕಾರ್ಯದರ್ಶಿ ಎನ್.ಎಸ್. ರೇವಣಸಿದ್ದಪ್ಪ ಹಾಗೂ ಪ್ರಭಾಸ್ ಭಟ್ ಉಪಸ್ಥಿತರಿದ್ದರು.