SK Home Ad
Home ನಮ್ಮ ಜಿಲ್ಲೆ ವಿಜಯನಗರ ಅಪಘಾತ: ಒಂದೂವರೆ ವರ್ಷದ ಮಗು ಸೇರಿ ಮೂವರ ದುರ್ಮರಣ

ಅಪಘಾತ: ಒಂದೂವರೆ ವರ್ಷದ ಮಗು ಸೇರಿ ಮೂವರ ದುರ್ಮರಣ

0
1

ವಿಜಯನಗರ: ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೂವರೆ ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ರಸ್ತೆ ಅಪಘಾತ ಹೊಸಪೇಟೆ ತಾಲೂಕಿನ ಧರ್ಮಸಾಗರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಬುಧುವಾರ ಸಂಜೆ ನಡೆದಿದೆ.

ಅಪಘಾತದಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಮೆಟ್ರಿ ಗ್ರಾಮದ ತಾಯಮ್ಮ (55), ಜ್ಯೋತಿ (28) ಹಾಗೂ ಒಂದೂವರೆ ವರ್ಷದ ಮಗು ದಿವ್ಯ ಮೃತಪಟ್ಟಿದ್ದಾರೆ. ಬೈಕ್ ಸವಾರಿ ಮಾಡುತ್ತಿದ್ದ ಲಕ್ಷ್ಮಣ್ ಹಾಗೂ ಅವರ ಮತ್ತೊಬ್ಬ ಮಗಳು ಸೃಷ್ಟಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೆಟ್ರಿ ಗ್ರಾಮದ ಲಕ್ಷ್ಮಣ್ ಅವರ ಕುಟುಂಬ ಹೊಸಪೇಟೆ ತಾಲೂಕಿನ ಕೊಟಗಿನಾಳ್ ಗ್ರಾಮಕ್ಕೆ ಶುಭಕಾರ್ಯವೊಂದರಲ್ಲಿ ಭಾಗವಹಿಸಲು ಬಂದಿತ್ತು. ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಮೆಟ್ರಿ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಧರ್ಮಸಾಗರ ಗ್ರಾಮದ ಬಳಿ ಹಿಂಬದಿಯಿಂದ ಬಂದ ಕಾರು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಡಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಮೂವರು ರಸ್ತೆಗೆ ಬಿದ್ದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಗಾಯಗೊಂಡ ಲಕ್ಷ್ಮಣ್ ಮತ್ತು ಸೃಷ್ಟಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣೆಯ ಪಿಐ ಗುರುರಾಜ್ ಕಟ್ಟಿಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಮೆಟ್ರಿ ಗ್ರಾಮದಲ್ಲಿ ಶೋಕದ ಛಾಯೆ ಮೂಡಿಸಿದೆ.