SK Home Ad
Home ನಮ್ಮ ಜಿಲ್ಲೆ ವಿಜಯನಗರ ಸಾವಿನ ಬಳಿಕ ಇಬ್ಬರ ಬಾಳಿಗೆ ಬೆಳಕಾದ ಆಂಬುಲೆನ್ಸ್ ಚಾಲಕ

ಸಾವಿನ ಬಳಿಕ ಇಬ್ಬರ ಬಾಳಿಗೆ ಬೆಳಕಾದ ಆಂಬುಲೆನ್ಸ್ ಚಾಲಕ

0
377

ಹೊಸಪೇಟೆ: ಸಾವಿನಲ್ಲೂ ಸಾರ್ಥಕತೆ ಮೆರೆದ ಹೊಸಪೇಟೆ 35ನೇ ವಾರ್ಡನ ಪಾರ್ವತಿ ನಗರದ ನಿವಾಸಿ ಆಂಬುಲೆನ್ಸ್ ಚಾಲಕ ರಾಮ್ ಬಾಬು (44) ಅವರು, ತಮ್ಮ ನೇತ್ರದಾನದ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ 100 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಮ್ ಬಾಬು ಅವರು ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ಇವರು ನಿವೃತ್ತ ಆಂಬುಲೆನ್ಸ್ ಚಾಲಕ ಬಾಬುರಾವ್ ಅವರ ಪುತ್ರರಾಗಿದ್ದಾರೆ.

ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಬಾಬುರಾವ್ ಕುಟುಂಬ ಮಾನವೀಯತೆ ಮೆರೆದಿದೆ. ಮೃತ ರಾಮ್ ಬಾಬು ಅವರ ಎರಡೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಇಬ್ಬರು ದೃಷ್ಟಿಹೀನರಿಗೆ ಹೊಸ ಬೆಳಕಿನ ಆಶಾಕಿರಣ ಮೂಡಿಸಿದೆ. ದಾನ ಮಾಡಿದ ನೇತ್ರಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನೇತ್ರ ಬ್ಯಾಂಕ್‌ಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಲಾಯಿತು.

ಈ ನೇತ್ರದಾನಕ್ಕೆ ಹೊಸಪೇಟೆಯ ಭಗತ್ ಸಿಂಗ್ ರಕ್ತದಾನಿಗಳ ಸಂಘದ ಅಧ್ಯಕ್ಷ ಕೆ.ಎಂ. ಸಂತೋಷ್ ಕುಮಾರ್ ಹಾಗೂ ಖಾಸಗಿ ಆಂಬುಲೆನ್ಸ್ ಚಾಲಕ ಜಮೀರ್ ನೆರವಾದರು. ತಕ್ಷಣವೇ ಹೊಸಪೇಟೆಯ ರೋಟರಿ ಉಚಿತ ಕಣ್ಣಿನ ಆಸ್ಪತ್ರೆಯ ಸಿಬ್ಬಂದಿ ಹಾಗೂ ಬಳ್ಳಾರಿಯ ವಿಮ್ಸ್ ನೇತ್ರ ಘಟಕದ ತಜ್ಞ ವೈದ್ಯರನ್ನು ಸಂಪರ್ಕಿಸಿದರು.

ಬಳಿಕ ವೈದ್ಯರ ತಂಡ ಹೊಸಪೇಟೆಗೆ ಆಗಮಿಸಿ, ರಾಮ್ ಬಾಬು ಅವರ ಮನೆ ಮುಂಭಾಗದಲ್ಲಿ ತಂದೆ, ತಾಯಿ, ಪತ್ನಿ, ಮಕ್ಕಳು ಹಾಗೂ ಸಹೋದರರ ಸಮ್ಮುಖದಲ್ಲಿ ಗೌರವಯುತವಾಗಿ ನೇತ್ರ ಸಂಗ್ರಹ ಪ್ರಕ್ರಿಯೆ ನೆರವೇರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಂ. ಸಂತೋಷ್ ಕುಮಾರ್, “ಗೆಳೆಯ ರಾಮ್ ಬಾಬು ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರು ಇಂದು ದೈಹಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರ ಕಣ್ಣುಗಳ ಮೂಲಕ ಇಬ್ಬರು ಈ ಜಗತ್ತನ್ನು ನೋಡುವಂತಾಗಲಿ. ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ನೇತ್ರದಾನಕ್ಕೆ ಮುಂದಾದ ಬಾಬುರಾವ್ ಕುಟುಂಬದ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಲಿ” ಎಂದು ಆಶಿಸಿದರು.

ತಮ್ಮ ತಂದೆಯಂತೆಯೇ ಆಂಬುಲೆನ್ಸ್ ಚಾಲಕರಾಗಿ ಸೇವೆ ಸಲ್ಲಿಸಿದ್ದ ರಾಮ್ ಬಾಬು, ಅವರು ಕೊವೀಡ್ ಸಂದರ್ಭದಲ್ಲಿ ಉತ್ತಮ ಸೇವೆ ನೀಡಿ ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿದ್ದವು ತೊಡಗಿಸಿಕೊಂಡಿದ್ದರು. ಇದೀಗ ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನ ನಂತರವೂ ಜನರ ಬದುಕಿಗೆ ಬೆಳಕಾಗುವ ಕಾರ್ಯಕ್ಕೆ ಕಾರಣರಾಗಿದ್ದಾರೆ.