ದೆಹಲಿ: ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಮಾರಕ ಬೌಲಿಂಗ್ ದಾಳಿಗೆ ಡೆಲ್ಲಿ ಕ್ಯಾಪಿಟಲ್ಸ್ ಪೆವಿಲಿಯನ್ ಪರೇಡ್ ನಡೆಸಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್‌ಗಳು ಆರಂಭದಲ್ಲಿಯೇ ಡೆಲ್ಲಿ ಬ್ಯಾಟರ್‌ಗಳನ್ನು ಕಾಡಿದರು. ಬೌಲರ್‌ಗಳ ಕರಾರುವಾಕ್ ದಾಳಿಗೆ ಬ್ಯಾಟ್ಸಮನ್‌ಗಳು ತತ್ತರಿಸಿ ಹೋದರು.
ಅಂತಿಮವಾಗಿ ಡೆಲ್ಲಿ 16.3 ಓವರ್‌ಗಳಲ್ಲಿ ಕೇವಲ 75 ರನ್‌ಗಳಿಗೆ ಆಲೌಟ್ ಆಯಿತು. 3.5 ಓವರ್‌ಗಳಲ್ಲಿ ಕೇವಲ 8 ರನ್‌ಗಳಿಗೆ ಪ್ರಮುಖ 6 ವಿಕೆಟ್ ಕಳೆದುಕೊಂಡು ಅತ್ಯಂತ ಕಡಿಮೆ ರನ್‌ಗಳ ಕುಸಿತ ಅನುಭವಿಸುವ ಭೀತಿಯಲ್ಲಿತ್ತು.
ಸಾಹಿಲ್ ಪರಾಖ್, ಸಮೀರ್ ರಿಜ್ವಿ, ಅಕ್ಷರ್ ಪಟೇಲ್ ಮತ್ತು ದುಷ್ಮಂತ ಚಮೀರ ಖಾತೆ ತೆರೆಯದೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಕೆಎಲ್ ರಾಹುಲ್ ಮತ್ತು ನಿತೀಶ್ ರಾಣಾ ಕೇವಲ 1 ರನ್ ಗಳಿಸಿ ಔಟಾದರು.
ಇನ್ನೋರ್ವ ಆಟಗಾರ ಟ್ರಿಸ್ಟಾನ್ ಸ್ಟಬ್ಸ್ ಕೂಡ ಕೇವಲ ಐದೇ ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪರೇಡ್ ನಡೆಸುತ್ತಿರುವಾಗ ಅಭಿಷೇಕ್ ಪೊರೆಲ್ ಮತ್ತು ಡೇವಿಡ್ ಮಿಲ್ಲರ್ 35 ರನ್‌ಗಳ ಜತೆಯಾಟ ನಡೆಸಿದ್ದೇ ಡೆಲ್ಲಿ ಪರ ಉತ್ತಮ ಜತೆಯಾಟ ಎನಿಸಿಕೊಂಡಿತು.
ಅಭಿಷೇಕ್ ಪೊರೆಲ್ ಕೊನೆಯವರೆಗೂ ಏಕಾಂಗಿಯಾಗಿ ಹೋರಾಡಿ 33 ಎಸೆತದಲ್ಲಿ 3 ಬೌಂಡರಿಗಳಿಂದ 30 ರನ್‌ಗಳಿಗೆ ಕೊನೆಯವರಾಗಿ ವಿಕೆಟ್ ಒಪ್ಪಿಸಿದರು. ಡೇವಿಡ್ ಮಿಲ್ಲರ್ 19, ಕೈಲ್ ಜೇಮಿಸನ್ 12 ರನ್ ಗಳಿಸಿ ಡೆಲ್ಲಿ ಮಾನ ಉಳಿಸಿದರು.
ಆರ್‌ಸಿಬಿ ಪರ ಜೋಶ್ ಹ್ಯಾಜಲ್‌ವುಡ್ 12ಕ್ಕೆ 4, ಭುವನೇಶ್ವರ್ ಕುಮಾರ್ 5ಕ್ಕೆ 3 ವಿಕಟ್ ಉರುಳಿಸಿದರೆ, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ಮತ್ತು ರಸಿಕ್ ಸಲಾಂ ದಾರ್ ತಲಾ ಒಂದು ವಿಕೆಟ್ ಪಡೆದರು.























