ಬೆಂಗಳೂರು: ರಾಯೋ ರೇಸಿಂಗ್ನ ಕೃಷ್ ಗುಪ್ತಾ ಅವರು ಬೆಂಗಳೂರಿನ ಕಾರ್ಟೋಪಿಯಾ ಸರ್ಕ್ಯೂಟ್ನಲ್ಲಿ ನಡೆದ ಮೆಕೊ ಎಫ್ಎಂಎಸ್ಸಿಐ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಚಾಂಪಿಯನ್ಶಿಪ್ನ ಆರನೇ ಹಾಗೂ ಅಂತಿಮ ಸುತ್ತಿನಲ್ಲಿ ಹಿರಿಯರ ವಿಭಾಗದಲ್ಲಿ ಪೋಡಿಯಂ ಸ್ಥಾನ ಪಡೆಯುವ ಮೂಲಕ ತಮ್ಮ ಚೊಚ್ಚಲ ರಾಷ್ಟ್ರೀಯ ರೊಟಾಕ್ಸ್ ಕಾರ್ಟಿಂಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಮುಂಬೈನ ಕೃಷ್ ಈ ಅಂತಿಮ ಸುತ್ತನ್ನು ಅತ್ಯಂತ ಕಳಪೆಯಾಗಿ ಆರಂಭಿಸಿದರು. ಕಳಪೆ ಕ್ವಾಲಿಫೈಯಿಂಗ್ನಿಂದಾಗಿ ಅವರು ಹದಿನಾರನೇ ಸ್ಥಾನಕ್ಕೆ ಕುಸಿದಿದ್ದರು. ಆದರೂ ಕೃಷ್ ಅದ್ಭುತವಾಗಿ ಚೇತರಿಸಿಕೊಂಡು, ಎರಡು ಹೀಟ್ಗಳಲ್ಲೂ 10 ಓವರ್ಟೇಕ್ಗಳನ್ನು ಮಾಡುವ ಮೂಲಕ ಎರಡರಲ್ಲೂ ಆರನೇ ಸ್ಥಾನ ಪಡೆದರು.
ಚಾಂಪಿಯನ್ಶಿಪ್ ಅಂಕಗಳನ್ನು ಹೊಂದಿರುವ ನಿರ್ಣಾಯಕ ಪ್ರಿ-ಫೈನಲ್ನಲ್ಲಿ ಕೃಷ್ ಆರನೇ ಸ್ಥಾನದಿಂದ ಆರಂಭಿಸಿದರು. ಕೆಲ ಕ್ಷಣದಲ್ಲೇ ಮೂರನೇ ಸ್ಥಾನಕ್ಕೆ ಜಿಗಿದ ಕೃಷ್, ಆ ಬಳಿಕ 2ನೇ ಸ್ಥಾನ ಪಡೆದು ಕೊನೆವರೆಗೂ ಅದೇ ಸ್ಥಾನ ಕಾಯ್ದುಕೊಂಡರು. ಚೆನ್ನೈನ ಎಸ್ಪೋರ್ಟ್ನ ಇಶಾಂತ್ ವೆಂಕಟೇಶನ್ ಪ್ರಿ-ಫೈನಲ್ ಗೆದ್ದರು.
ಕೃಷ್ ಫೈನಲ್ ಅನ್ನು ಎರಡನೇ ಸ್ಥಾನದಿಂದ ಆರಂಭಿಸಿದರೂ, ಆರಂಭದಲ್ಲೇ ಮೂರನೇ ಸ್ಥಾನಕ್ಕೆ ಕುಸಿದರು. ನಂತರ ಅವರನ್ನು ಬೆಂಗಳೂರಿನ ಇಶಾನ್ ಮಾದೇಶ್ ಹಿಂದಿಕ್ಕಿದರು. ಆದರೆ ಅಂತಿಮವಾಗಿ ವೆಂಕಟೇಶನ್ ಮತ್ತು ಬೆಂಗಳೂರಿನ ಎಸ್ಪೋರ್ಟ್ನ ರುಹಾನ್ ಆಳ್ವಾ ಅವರ ನಂತರ ಮೂರನೇ ಸ್ಥಾನ ಪಡೆದರು.
ಕೃಷ್ ಪ್ರಿ-ಫೈನಲ್ ಮತ್ತು ಫೈನಲ್ ಎರಡರಲ್ಲೂ ತಮ್ಮ ಹತ್ತಿರದ ಚಾಂಪಿಯನ್ಶಿಪ್ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಸ್ಥಾನ ಪಡೆದರು. ಇದು ಕೃಷ್ ಅವರಿಗೆ ತಮ್ಮ ಚಾಂಪಿಯನ್ಶಿಪ್ ಮುನ್ನಡೆಯನ್ನು ವಿಸ್ತರಿಸಲು ಮತ್ತು ಪುಣೆಯ ಕ್ರೆಸ್ಟ್ ಮೋಟಾರ್ಸ್ಪೋರ್ಟ್ನ ಅರ್ಜುನ್ ಛೇಡಾ ಹಾಗೂ ಬೆಂಗಳೂರಿನ ಅಕ್ಷತ್ ಮಿಶ್ರಾ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲಲು ಅವಕಾಶ ಮಾಡಿಕೊಟ್ಟಿತು.






















