ಎರಡು ಲಕ್ಷ ಕಿ.ಮೀ. ಬೈಕ್ ಪ್ರಯಾಣದಿಂದ ಹುಟ್ಟಿದ ಉದ್ಯಮ: ರೈಡರ್ಗಳ ಸಮಸ್ಯೆಯೇ ಉದ್ಯಮದ ಐಡಿಯಾ – ಮೈಸೂರಿನ ಯುವಕರ HELMIFY ಹೆಲ್ಮೆಟ್ ಕ್ಲೀನಿಂಗ್ ಸೇವೆ
ಮೈಸೂರು: ಬೈಕ್ನಲ್ಲಿ ದೂರದ ಪ್ರಯಾಣ ಮಾಡುವ ಹವ್ಯಾಸ, ಹೆಲ್ಮೆಟ್ನ ದುರ್ವಾಸನೆ ಮತ್ತು ಅದನ್ನು ಸ್ವಚ್ಛಗೊಳಿಸುವ ಕಿರಿಕಿರಿ—ಈ ಸಾಮಾನ್ಯ ಸಮಸ್ಯೆಯೇ ಇಬ್ಬರು ಯುವಕರಿಗೆ ಹೊಸ ಸ್ಟಾರ್ಟ್ಅಪ್ ಆರಂಭಿಸಲು ಪ್ರೇರಣೆಯಾಗಿದೆ. ಇಂಜಿನಿಯರಿಂಗ್ ಓದುವ ದಿನಗಳಿಂದಲೇ ಲಾಂಗ್ ಬೈಕ್ ರೈಡ್ಗಳ ಬಗ್ಗೆ ಆಸಕ್ತಿ ಹೊಂದಿದ್ದ ಸುಮುಖ್ ಅರುಣ್ ಕುಮಾರ್ ಮತ್ತು ಅವರ ಸ್ನೇಹಿತ ವಿಕಿಲ್, ಹೆಲ್ಮೆಟ್ ಸ್ವಚ್ಛತೆಗೆ ಸ್ವಯಂಚಾಲಿತ ತಂತ್ರಜ್ಞಾನ ಪರಿಚಯಿಸುವ ಉದ್ದೇಶದಿಂದ HELMIFY LLP ಸಂಸ್ಥೆಯನ್ನು ರೂಪಿಸಿದ್ದಾರೆ.
ಸುಮುಖ್ ಮತ್ತು ವಿಕಿಲ್ ಅವರು ತಮ್ಮ ನೆಚ್ಚಿನ ರಾಯಲ್ ಎನ್ಫೀಲ್ಡ್ ಬುಲೆಟ್ ಹಾಗೂ ಹಿಮಾಲಯನ್ ಬೈಕ್ಗಳಲ್ಲಿ ಸುಮಾರು ಎರಡು ಲಕ್ಷ ಕಿಲೋಮೀಟರ್ ಪ್ರಯಾಣಿಸಿರುವ ಇವುರುಗಳು. ದೀರ್ಘ ಪ್ರಯಾಣಗಳ ಸಂದರ್ಭದಲ್ಲಿ ನಿರಂತರವಾಗಿ ಹೆಲ್ಮೆಟ್ ಬಳಸುವುದರಿಂದ ಅದರ ಒಳಭಾಗದಲ್ಲಿ ಬೆವರು, ಕೊಳಕು ಮತ್ತು ದುರ್ವಾಸನೆ ಸಂಗ್ರಹವಾಗುತ್ತಿತ್ತು. ಹೆಲ್ಮೆಟ್ಗಳನ್ನು ಪದೇಪದೆ ಸ್ವಚ್ಛಗೊಳಿಸುವುದು ಸಮಯ ತೆಗೆದುಕೊಳ್ಳುವ ಕೆಲಸವಾಗಿದ್ದರಿಂದ, ಈ ಸಮಸ್ಯೆಗೆ ಸುಲಭವಾದ ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರ ಕಂಡುಕೊಳ್ಳುವ ಆಲೋಚನೆ ಅವರಲ್ಲಿ ಮೂಡಿತು.
ಎರಡು ಹೆಲ್ಮೆಟ್ಗಳನ್ನು ಏಕಕಾಲದಲ್ಲಿ ಸ್ವಚ್ಛಗೊಳಿಸುವ ವ್ಯವಸ್ಥೆ : ಈ ಆಲೋಚನೆಯ ಆಧಾರದಲ್ಲಿ ರೂಪುಗೊಂಡ HELMIFY ಸಂಸ್ಥೆಯು ಎರಡು ಹೆಲ್ಮೆಟ್ಗಳನ್ನು ಒಂದೇ ಸಮಯದಲ್ಲಿ ಸ್ವಚ್ಛಗೊಳಿಸಬಲ್ಲ ಸ್ವಯಂಚಾಲಿತ ‘ಡ್ಯುಯಲ್-ಬೇ’ ಹೆಲ್ಮೆಟ್ ಕ್ಲೀನಿಂಗ್ ಯಂತ್ರವನ್ನು ಪರಿಚಯಿಸಿದ್ದಾರೆ. ಈ ವ್ಯವಸ್ಥೆಯಲ್ಲಿ UV-C ಕ್ರಿಮಿನಾಶಕ ತಂತ್ರಜ್ಞಾನ, ದುರ್ವಾಸನೆ ನಿವಾರಣೆ, ಸ್ಟೀಮ್ ಕ್ಲೀನಿಂಗ್ ಮತ್ತು ನಿಯಂತ್ರಿತ ತಾಪಮಾನದಲ್ಲಿ ಒಣಗಿಸುವ ಪ್ರಕ್ರಿಯೆಗಳನ್ನು ಬಳಸಲಾಗುತ್ತದೆ.
ಯಂತ್ರದ ಸ್ವಚ್ಛಗೊಳಿಸುವ ವಿಧಾನ ಮತ್ತು ಅವಧಿ ಆಯ್ದ ಸೇವೆಯ ಪ್ರಕಾರ ಬದಲಾಗುತ್ತದೆ : ಹೆಲ್ಮೆಟ್ ಸ್ವಚ್ಛಗೊಳಿಸುವ ಸೇವೆಗೆ ಸಂಸ್ಥೆಯು ಮೂರು ವಿಧದ ಆಯ್ಕೆಗಳನ್ನು ನೀಡಿದೆ. ಡ್ರೈ ಕ್ಲೀನ್ ಸೇವೆಗೆ ₹49, ಡೀಪ್ ಕ್ಲೀನ್ಗೆ ₹79 ಮತ್ತು ಅಡ್ವಾನ್ಸ್ ಕ್ಲೀನ್ಗೆ ₹99 ಆರಂಭಿಕ ದರಗಳನ್ನು ಉಲ್ಲೇಖಿಸಲಾಗಿದೆ. ಗ್ರಾಹಕರು ಡಿಜಿಟಲ್ ಪಾವತಿ ಅಥವಾ UPI ಮೂಲಕ ಹಣ ಪಾವತಿಸಿ, ಯಂತ್ರದಲ್ಲಿ ಹೆಲ್ಮೆಟ್ ಇರಿಸಿ ಸ್ವಚ್ಛಗೊಳಿಸಿದ ಬಳಿಕ ಮರಳಿ ಪಡೆಯುವ ಸ್ವಯಂಸೇವಾ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಮೈಸೂರಿನಿಂದ ದೇಶಾದ್ಯಂತ ವಿಸ್ತರಣೆಯ ಗುರಿ : HELMIFY LLP ಕಂಪನಿಯು ಮೈಸೂರಿನಲ್ಲಿ ತನ್ನ ಮೊದಲ ಯಂತ್ರವನ್ನು ಸ್ಥಾಪಿಸಿ ಸೇವೆ ಆರಂಭಿಸಿದ್ದು. ಕರ್ನಾಟಕದ ಪ್ರಮುಖ ನಗರಗಳಲ್ಲಿ ಸೇವೆಯನ್ನು ವಿಸ್ತರಿಸುವುದರ ಜೊತೆಗೆ, ದೇಶಾದ್ಯಂತ ಹೆಲ್ಮೆಟ್ ಸ್ವಚ್ಛತಾ ಕೇಂದ್ರಗಳ ಜಾಲ ನಿರ್ಮಿಸುವುದು ಸಂಸ್ಥೆಯ ಗುರಿಯಾಗಿದೆ. ಇದಕ್ಕಾಗಿ ಫ್ರಾಂಚೈಸಿ ಮಾದರಿಯಲ್ಲಿಯೂ ವಿಸ್ತರಣೆ ಮಾಡುವ ಯೋಜನೆಯನ್ನು ಹೊಂದಿದ್ದೆವೆ ಎಂದು ಸುಮುಖ್ ಅರುಣ್ ಕುಮಾರ್ ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್ಗಳು, ಮಾಲ್ಗಳು, ವಾಹನ ಸೇವಾ ಕೇಂದ್ರಗಳು, ಕಾಲೇಜುಗಳು ಮತ್ತು ಬೈಕ್ ಸವಾರರು ಹೆಚ್ಚಾಗಿ ಭೇಟಿ ನೀಡುವ ಸ್ಥಳಗಳಲ್ಲಿ ಇಂತಹ ಯಂತ್ರಗಳನ್ನು ಸ್ಥಾಪಿಸುವುದು ಸಂಸ್ಥೆಯ ವಿಸ್ತರಣಾ ಯೋಜನೆಯ ಭಾಗವಾಗಿದೆ. ದೈನಂದಿನ ಪ್ರಯಾಣಿಕರು, ದೂರ ಪ್ರಯಾಣದ ಬೈಕ್ ಸವಾರರು ಮತ್ತು ಬಾಡಿಗೆ ಬೈಕ್ ಸೇವೆಗಳನ್ನು ಬಳಸುವವರಿಗೆ ಈ ವ್ಯವಸ್ಥೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಿದೆ.
ಇವರ ಈ ಸಾಧನೆ ದೈನಂದಿನ ಜೀವನದಲ್ಲಿ ಎದುರಾಗುವ ಸಣ್ಣ ಸಮಸ್ಯೆಯೊಂದನ್ನು ಉದ್ಯಮದ ಅವಕಾಶವಾಗಿ ಪರಿವರ್ತಿಸುವ ಯುವ ಉದ್ಯಮಶೀಲತೆಯ ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ನಗರಗಳಿಗೆ ಸೇವೆ ವಿಸ್ತರಿಸಲು ಸಾಧ್ಯವಾದರೆ, ಹೆಲ್ಮೆಟ್ ಸ್ವಚ್ಛತೆಯನ್ನೂ ಬೈಕ್ ಸವಾರರ ನಿಯಮಿತ ಆರೈಕೆಯ ಭಾಗವನ್ನಾಗಿ ಮಾಡುವ ಅವಕಾಶವಿದೆ.
- WPL 2027: 2 ಗಂಟೆ ಮೌನದ ಬಳಿಕ ಆರ್ಸಿಬಿ ಖಾತೆ ಓಪನ್; 15ರ ಬಾಲಕಿಗೆ ಬಲೆಬೀಸಿದ ಡೆಲ್ಲಿ, ಕೊಚ್ಚಿಯಲ್ಲಿ ಜಾಕ್ಪಾಟ್ ಹೊಡೆದಿದ್ದು ಯಾರು?
- ದಾವೋಸ್ ಎಐ ಶೃಂಗಸಭೆಗೆ ಮುಖ್ಯಮಂತ್ರಿಗಳಿಗೆ ಆಹ್ವಾನ
- ಗ್ಯಾರಂಟಿ ಯೋಜನೆಗಳ ಕುರಿತ ಅಪಪ್ರಚಾರಕ್ಕೆ ಕಡಿವಾಣ ಹಾಕಿ
- ಬೈಕ್ ರೈಡಿಂಗ್ ಕ್ರೇಜ್ನಿಂದ ಸ್ಟಾರ್ಟ್ಅಪ್ವರೆಗೆ: ಹೆಲ್ಮೆಟ್ ಸ್ವಚ್ಛತೆಗೆ ಹೊಸ ತಂತ್ರಜ್ಞಾನ ತಂದ ಮೈಸೂರಿನ ಯುವಕರು!
- ಜಿಯೋ ಪ್ಲಾಟ್ಫಾರ್ಮ್ಸ್ ಬಂಪರ್ ಲಿಸ್ಟಿಂಗ್: ಮೊದಲ ದಿನವೇ ಹೂಡಿಕೆದಾರರ ಸಂಪತ್ತು ₹2.76 ಲಕ್ಷ ಕೋಟಿ ಹೆಚ್ಚಳ






















