ವಿಜಯಲಕ್ಷ್ಮಿ ದರ್ಶನ್ ಹಾಗೂ ವಿನೀಶ್ ದರ್ಶನ್ ಸಾಥ್
ಧನ್ವೀರ್ ಗೌಡ ಅಭಿನಯದ ಹಯಗ್ರೀವ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಟೀಸರ್ ಹಾಗೂ ಹಾಡುಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ಇದೀಗ ಟ್ರೇಲರ್ ರಿಲೀಸ್ ಮಾಡಲು ಮುಂದಾಗಿದೆ. ಫೆಬ್ರವರಿ 21ರಂದು (ಶನಿವಾರ) ಮಂಡ್ಯದಲ್ಲಿ ಅದಕ್ಕೆ ಭರ್ಜರಿ ವೇದಿಕೆಯೂ ಸಿದ್ಧವಾಗಿದೆ.
ಚಿತ್ರತಂಡದ ಮಾಹಿತಿ ಪ್ರಕಾರ, ಮಂಡ್ಯದ ಸುಮಾ ರವಿ ಕನ್ವೆನ್ಷನ್ ಹಾಲ್‌ನಲ್ಲಿ ಸಂಜೆ 5 ಗಂಟೆಗೆ ‘ಹಯಗ್ರೀವ’ ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಲಿದೆ. ವಿಜಯಲಕ್ಷ್ಮಿ ದರ್ಶನ್ ಹಾಗೂ ವಿನೀಶ್ ದರ್ಶನ್ ವಿಶೇಷ ಅತಿಥಿಗಳಾಗಿ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಚಿತ್ರತಂಡದ ಪ್ರಮುಖ ಕಲಾವಿದರು ಮತ್ತು ತಾಂತ್ರಿಕ ತಂಡ ಭಾಗವಹಿಸಲಿದೆ. ಅಭಿಮಾನಿಗಳಿಗೆ ವಿಶೇಷ ಆಹ್ವಾನ ನೀಡಲಾಗಿದ್ದು, ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ರಣಜಿ ಟ್ರೋಫಿ ಫೈನಲ್ ಪಂದ್ಯ
ಕಥೆ, ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳ ಸಂಯೋಜನೆಯೊಂದಿಗೆ ‘ಹಯಗ್ರೀವ’ ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಮೂಡಿಸಿದೆ. ಧನ್ವೀರ್ ಗೌಡ ಈ ಚಿತ್ರದಲ್ಲಿ ವಿಭಿನ್ನ ಛಾಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೀರ್ಷಿಕೆ, ಪೋಸ್ಟರ್, ಟೀಸರ್… ಹೀಗೆ ಹಲವಾರು ವಿಷಯಗಳ ಮೂಲಕ ಸದ್ದು ಮಾಡಿರುವ ಈ ಚಿತ್ರದ ಕಥಾವಸ್ತು ಕುರಿತು ಇನ್ನಷ್ಟು ಮಾಹಿತಿ ಟ್ರೇಲರ್ ಮೂಲಕ ಬಹಿರಂಗವಾಗಲಿದೆ.
ಕೆವಿಸಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ಹಯಗ್ರೀವ’ನಿಗೆ ಪದ್ಮಾ ಸಮೃದ್ಧಿ ಮಂಜುನಾಥ್ ಬಂಡವಾಳ ಹೂಡಿದ್ದಾರೆ. ವಿರಾಟ್ ಸಾಯಿ ಕ್ರಿಯೇಷನ್ಸ್ ಅರ್ಪಿಸುವ ಈ ಚಿತ್ರಕ್ಕೆ ಮಹೇಶ್ ಗೌಡ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
ಇದನ್ನೂ ಓದಿ: ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದ ವಂದೇ ಭಾರತ್ ರೈಲಿಗೆ ಕಲ್ಲುತೂರಾಟ
ಧನ್ವೀರ್ ಜೋಡಿಯಾಗಿ ಸಂಜನಾ ಆನಂದ್ ಇದ್ದಾರೆ. ಸಾಧುಕೋಕಿಲ, ಶರತ್ ಲೋಹಿತಾಶ್ವ, ರಮೇಶ್ ಭಟ್, ಅಶ್ವಿನಿ ಗೌಡ, ಶೋಭರಾಜ್, ಸಂಗೀತಾ, ಕೃಷ್ಣ ಹೆಬ್ಬಾಳೆ, ಹಾಗೂ ಗಿಲ್ಲಿ ನಟ ಇತರರು ಚಿತ್ರದ ತಾರಾಗಣದಲ್ಲಿದ್ದಾರೆ.
ಡಾ. ಕೆ.ರವಿವರ್ಮ, ಡಿಫರೆಂಟ್ ಡ್ಯಾನಿ ಹಾಗೂ ಅರ್ಜುನ್ ರಾಜ್ ಸಾಹಸ ಸಂಯೋಜಿಸಿದ್ದು, ಶೈಲೇಶ್ ಕುಮಾರ್ ಮತ್ತು ಚೇತನ್ ಸಿದ್ ಸಂಭಾಷಣೆ ಬರೆದಿದ್ದಾರೆ. ಗಿರೀಶ್ ಆರ್ ಗೌಡ ಛಾಯಾಗ್ರಹಣ ಮತ್ತು ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ: ಬಾಗಲಕೋಟೆ: ಶಿವಾಜಿ ಮೆರವಣಿಗೆ ವೇಳೆ ಕಲ್ಲುತೂರಾಟ – 8 ಮಂದಿ ಬಂಧನ
ಬೃಹತ್ ಮೊತ್ತಕ್ಕೆ ವಿತರಣಾ ಹಕ್ಕು ಬಿಕರಿ: ಧನ್ವೀರ್ ನಟನೆಯ ಈವರೆಗಿನ ಸಿನಿಮಾಗಳಿಗೆ ಹೋಲಿಸಿದರೆ, ‘ಹಯಗ್ರೀವ’ ವಿತರಣಾ ಹಕ್ಕು ದೊಡ್ಡ ಮೊತ್ತಕ್ಕೆ ಬಿಕರಿಯಾಗಿದೆ. ಬೆಂಗಳೂರು ಕುಮಾರ್ ಫಿಲಂಸ್ ಸಂಸ್ಥೆ ಬೃಹತ್ ಮೊತ್ತಕ್ಕೆ ಈ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ತನ್ನದಾಗಿಸಿಕೊಂಡಿದೆ. ಕರ್ನಾಟಕದಾದ್ಯಂತ ಬೆಂಗಳೂರು ಕುಮಾರ್ ‘ಹಯಗ್ರೀವ’ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲಿದ್ದಾರೆ.























