SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ಟಾಸ್ಕ್‌ನಲ್ಲಿ ಮಂಜನಿಂದ ಅಸಭ್ಯ ಭಾಷೆ ಬಳಕೆ; ‘ಕಿಚ್ಚ’ನ ಪಂಚಾಯಿತಿಗೆ ಕಾದ ವೀಕ್ಷಕರು!

ಬಿಗ್ ಬಾಸ್ 13: ಟಾಸ್ಕ್‌ನಲ್ಲಿ ಮಂಜನಿಂದ ಅಸಭ್ಯ ಭಾಷೆ ಬಳಕೆ; ‘ಕಿಚ್ಚ’ನ ಪಂಚಾಯಿತಿಗೆ ಕಾದ ವೀಕ್ಷಕರು!

0
25

BBK13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಮಾಡರ್ನ್ ಮಹಾಕವಿ ಮಂಜ ವರ್ತನೆ ಹಾಗೂ ಭಾಷಾ ಬಳಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಮೊದಲಿನಿಂದಲೂ ಅಬ್ಬರದ ಧ್ವನಿಯಲ್ಲೇ ಗಮನ ಸೆಳೆಯುತ್ತಿದ್ದ ಮಂಜ, ‘ರಾಕ್ಷಸರು ವರ್ಸಸ್ ಗಂಧರ್ವರು’ ಟಾಸ್ಕ್‌ನಲ್ಲಿ ತಮ್ಮ ಗಡಿ ದಾಟಿ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಆರಂಭದಲ್ಲಿ ರಾಕ್ಷಸರ ತಂಡದಲ್ಲಿದ್ದಾಗ ಆರ್ಭಟದಿಂದಲೇ ಟಾಸ್ಕ್ ಆಡಿದ್ದ ಮಂಜ, ಬಳಿಕ ಗಂಧರ್ವರ ಪಾತ್ರಕ್ಕೆ ಬದಲಾದಾಗ ರಾಕ್ಷಸರ ಆಜ್ಞೆಗಳನ್ನು ಪಾಲಿಸುವುದು ಅನಿವಾರ್ಯವಾಗಿತ್ತು. ಟಾಸ್ಕ್‌ನಲ್ಲಿ ಗಂಭೀರವಾಗಿ ಪಾಲ್ಗೊಂಡು ರಾಕ್ಷಸರು ಹೇಳಿದ ಕೆಲಸಗಳನ್ನು ಮಾಡುತ್ತಿದ್ದರೂ, ಅಂತಿಮ ಹಂತದಲ್ಲಿ ಸೋಲಿನ ಭಯದಿಂದ ಅವರು ಅತ್ಯಂತ ಕೀಳುಮಟ್ಟದ ಹಾಗೂ ಅಸಭ್ಯ ಭಾಷೆಯನ್ನು ಬಳಸಿದ್ದಾರೆ ಎನ್ನಲಾಗಿದೆ.

ಈ ಮೊದಲು ರಾಕ್ಷಸರಾಗಿದ್ದಾಗ ಸ್ಪರ್ಧಿಗಳಾದ ಯಶಸ್ ಮತ್ತು ಕಿರಣ್ ಶಾಸ್ತ್ರಿ ವಿರುದ್ಧ ‘ಲೇ ಮೂಲಂಗಿ’, ‘ಸ್ತ್ರೀ ವ್ಯಾಮೋಹ ಇರುವ ಕಳ್ಳ ನಾಯಿ’ ಎಂದೆಲ್ಲ ನಿಂದಿಸಿದ್ದ ಮಂಜ, ಅಕ್ಟೋಬರ್ 8ರ ಸಂಚಿಕೆಯಲ್ಲಿ ಸ್ಪರ್ಧಿ ಯಶಸ್ ಕುಟುಂಬದವರ ಕುರಿತು ವಾಹಿನಿಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗದಷ್ಟು ಅಶ್ಲೀಲ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ. ಮಂಜ ಈ ಮಾತುಗಳು ಇತರೆ ಸ್ಪರ್ಧಿಗಳಲ್ಲಿ ತೀವ್ರ ಅಸಹ್ಯ ಹಾಗೂ ಆಕ್ರೋಶ ಮೂಡಿಸಿದೆ.

ಮಂಜನ ಈ ನಡೆಗೆ ಬಿಗ್ ಬಾಸ್ ವೀಕ್ಷಕರಿಂದಲೂ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, “ಮಂಜ ಈ ವಾರಾಂತ್ಯದಲ್ಲಿ ಮನೆಯಿಂದ ಹೊರಹೋಗಬೇಕು” ಎಂದು ಮನೆಮಂದಿ ಚರ್ಚಿಸುತ್ತಿದ್ದಾರೆ. ಮುಂಬರುವ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಈ ಗಂಭೀರ ವಿಚಾರವನ್ನು ಹೇಗೆ ನಿಭಾಯಿಸಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.