SK Home Ad
Home ನಮ್ಮ ಜಿಲ್ಲೆ ಬೆಂಗಳೂರು ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ, ವಿಭಜನೆ ಮಾಡುವುದಲ್ಲ

ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ, ವಿಭಜನೆ ಮಾಡುವುದಲ್ಲ

0
31

ಬೆಂಗಳೂರು: “ಸರಕಾರ ಏನೇ ಮಾಡಬಹುದು. ಆದರೆ ಗುರುಗಳ ಹಾಗೂ ಗುರುಮಠಗಳ ಕಾರ್ಯಗಳು ಸ್ತುತ್ಯಾರ್ಹ. ಗುರು ಇಲ್ಲದೇ ಒಂದು ಹೆಜ್ಜೆ ಮುಂದೆ ಇಡಲು ಆಗದು. ಅಕ್ಷರ, ಅನ್ನ, ಧರ್ಮ ದಾಸೋಹವನ್ನು ಮಠಾಧೀಶರುಗಳು ಮಾಡುತ್ತಿದ್ದಾರೆ. ಇದು ಸ್ತುತ್ಯಾರ್ಹ” ಎಂದು ಸಿಎಂ‌ ಡಿ.ಕೆ. ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯತಾ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ 25 ಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳ ನಿಯೋಗ ಉದ್ದೇಶಿಸಿ ಗೃಹಕಚೇರಿ ಕೃಷ್ಣಾದಲ್ಲಿ ಶನಿವಾರ ಮಾತನಾಡಿದರು.

“ಈ ಹಿಂದೆ ವೀರಶೈವ, ಲಿಂಗಾಯತ ಬೇರೆ ಮಾಡಲು ಹೋದಾಗ ಸಮುದಾಯದ ಗುರುಗಳ ಕ್ಷಮೆ ಕೇಳಿದ್ದೆ. ನಾವು ಸೂಜಿಯಂತೆ ಹೊಲಿಯುವ ಕೆಲಸ ಮಾಡುತ್ತೇವೆ. ಕತ್ತರಿಯಂತೆ ಕತ್ತರಿಸುವ ಕೆಲಸ ಮಾಡುವುದಿಲ್ಲ. ನಮ್ಮದು ಸಮಾಜ ಒಗ್ಗೂಡಿಸುವ ಧರ್ಮ. ವಿಭಜನೆ ಮಾಡುವುದಲ್ಲ. ಒಗ್ಗಟ್ಟಿನಲ್ಲಿ ಶಕ್ತಿ ಇದೆ” ಎಂದು ಹೇಳಿದರು.

“ಬಾಳೆಹೊನ್ನೂರು ಮಠ ಸೇರಿದಂತೆ ಅನೇಕ ಮಠಗಳಿಗೆ ಭೇಟಿ ಕೊಟ್ಟಿದ್ದೇನೆ. ಅಲ್ಲಿನ ಆಚಾರ ವಿಚಾರ ಗಮನಿಸಿದ್ದೇನೆ. ನಾನು ವೀರ ಗಂಗಾಧರ ಅಜ್ಜಯ್ಯನವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೇನೆ. ಇದಕ್ಕೆ ಇಡೀ ದೇಶದ ನಾಯಕರು ಅಚ್ಚರಿಪಟ್ಟರು” ಎಂದರು.

“ಚೆನ್ನೈನ ಆಸ್ಪತ್ರೆಯಲ್ಲಿ ಸಿದ್ದಗಂಗಾ ಶ್ರೀಗಳಿಗೆ ಮುಸ್ಲಿಂ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದರು. ಆಗ ನಾನು ಧರ್ಮ, ಜಾತಿ ಎಂಬುದು ಮಾನವೀಯತೆಯಲ್ಲಿ ಇದೆ. ಎಲ್ಲರೂ ಒಂದೇ ಎಂದು ಹೇಳಿದಾಗ ಬಹಳ ಜನ ಟೀಕೆ ಮಾಡಿದರು. ಆದರೆ ನಾನು ತಲೆ ಕೆಡಿಸಿಕೊಳ್ಳಲಿಲ್ಲ” ಎಂದರು.

ದಸರಾ ಉದ್ಘಾಟನೆಗೆ ಗವಿಶ್ರೀಗಳು ಒಪ್ಪಿಲ್ಲವೆಂದು ಸುಳ್ಳುಸುದ್ದಿ: “ದಸರಾ ಉದ್ಘಾಟನೆಯನ್ನು ಕೊಪ್ಪಳ ಗವಿಸಿದ್ದೇಶ್ವರ ಮಠಗಳ ಶ್ರೀಗಳು ನೆರವೇರಿಸಲಿದ್ದಾರೆ. ಆ ಮಠದ ಕೆಲಸ ನೋಡಿದ್ದೇನೆ. ಅವರ ವ್ಯಕ್ತಿತ್ವ ದೊಡ್ಡದು. ಅವರನ್ನು ಇಡೀ ರಾಜ್ಯ ಒಪ್ಪಿದೆ. ಸ್ವಾಮಿಗಳೂ ಉದ್ಘಾಟನೆಗೆ ಒಪ್ಪಿದ್ದಾರೆ. ಅವರ ಜತೆ ಮಾತಾಡಿಯೇ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಆದರೆ ಕೆಲವರು ಇದರಲ್ಲೂ ರಾಜಕೀಯ ಮಾಡಲು ನೋಡಿದರು. ಸ್ವಾಮಿಗಳು ಒಪ್ಪಿಲ್ಲವೆಂದು ಸುಳ್ಳು ಸುದ್ದಿ ಹಬ್ಬಿಸಿದರು” ಎಂದರು.

“ನನಗೆ ಸಿಕ್ಕಿರೋ ಅವಕಾಶದಲ್ಲಿ ಜನರ ಹೃದಯ ಗೆದ್ದು, ಕೆಲಸ ಮಾಡುವೆ. ಅದೇ ನನ್ನ ಗುರಿ. ಗುರುಗಳೆಲ್ಲರೂ ಮಾಡಿರುವ ಆಶೀರ್ವಾದ ನನಗೆ ಮಾತ್ರವಲ್ಲ, ಇಡೀ ಸರಕಾರಕ್ಕೆ ಇದೆ” ಎಂದರು.