SK Home Ad
Home ಕ್ರೀಡೆ ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬೆನ್ನಲ್ಲೇ ಬಿಸಿಸಿಐಗೆ ಶಮಿ ಖಡಕ್ ಗುದ್ದು!

ಭುವನೇಶ್ವರ್ ಕುಮಾರ್ ಕಮ್‌ಬ್ಯಾಕ್ ಬೆನ್ನಲ್ಲೇ ಬಿಸಿಸಿಐಗೆ ಶಮಿ ಖಡಕ್ ಗುದ್ದು!

0
33

ನ್ಯೂಜಿಲೆಂಡ್ ಪ್ರವಾಸದ ಟಿ20 ಸರಣಿಗೆ 36 ವರ್ಷದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ ಬರೋಬ್ಬರಿ 4 ವರ್ಷಗಳ ಬಳಿಕ ಭಾರತ ತಂಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಅದೇ ವಯಸ್ಸಿನ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಅವರನ್ನು ಬಿಸಿಸಿಐ ಆಯ್ಕೆ ಸಮಿತಿ ಸಂಪೂರ್ಣವಾಗಿ ಕಡೆಗಣಿಸಿರುವುದು ಇದೀಗ ಕ್ರಿಕೆಟ್ ಅಂಗಳದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ತಮ್ಮನ್ನು ಸತತವಾಗಿ ನಿರ್ಲಕ್ಷಿಸುತ್ತಿರುವ ಆಯ್ಕೆಗಾರರ ವಿರುದ್ಧ ಶಮಿ ನೇರವಾಗಿಯೇ ಗುಡುಗಿದ್ದಾರೆ.

ಭುವಿ ಆಯ್ಕೆಯ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಶಮಿ, “ಭುವನೇಶ್ವರ್ ಕುಮಾರ್‌ಗೆ ದೇಶವನ್ನು ಪ್ರತಿನಿಧಿಸಲು ಮತ್ತೊಂದು ಅವಕಾಶ ಸಿಕ್ಕಿದೆ, ಅವರಿಗೆ ಒಳ್ಳೆಯದಾಗಲಿ. ಆದರೆ ಅವರ ಕಮ್‌ಬ್ಯಾಕ್ ಬಗ್ಗೆ ನನಗೆ ಯಾವುದೇ ಆಶ್ಚರ್ಯವಿಲ್ಲ. ಕಳೆದ 2 ರಿಂದ 3 ವರ್ಷಗಳಿಂದ ನನ್ನ ವಿಷಯದಲ್ಲಿ ಇದೇ ಅನ್ಯಾಯ ನಡೆಯುತ್ತಿದೆ.

ಬಂಗಾಳ ಪರ ದೇಶಿ ಕ್ರಿಕೆಟ್‌ನಲ್ಲಿ ನಿರಂತರವಾಗಿ ವಿಕೆಟ್ ಉರುಳಿಸುತ್ತಿದ್ದೇನೆ, ನನ್ನ ಫಿಟ್‌ನೆಸ್ ಸಾಬೀತುಪಡಿಸಿದ್ದೇನೆ. ಇಷ್ಟಾದರೂ ನನಗೆ ಭಾರತ ಜೆರ್ಸಿ ಧರಿಸಲು ಅವಕಾಶ ಸಿಗದಿದ್ದರೆ ಅದು ನನಗಾಗುವ ನಷ್ಟವೇನೂ ಅಲ್ಲ” ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ಭಾರತದ ಪರ ಈ ಇಬ್ಬರು ದಿಗ್ಗಜರ ಅಂತರರಾಷ್ಟ್ರೀಯ ಅಂಕಿ-ಅಂಶಗಳನ್ನು ಗಮನಿಸಿದರೆ ನಂಬರ್ ಗೇಮ್‌ನಲ್ಲಿ ಶಮಿ ಬಲವೇ ಮೇಲ್ಗೈಯಲ್ಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಶಮಿ ಆಡಿರುವ 64 ಪಂದ್ಯಗಳಲ್ಲಿ 229 ವಿಕೆಟ್ (6 ಬಾರಿ 5 ವಿಕೆಟ್ ಗೊಂಚಲು) ಪಡೆದಿದ್ದರೆ, ಭುವಿ 21 ಟೆಸ್ಟ್‌ಗಳಿಂದ 63 ವಿಕೆಟ್ ಕಬಳಿಸಿದ್ದಾರೆ. ಏಕದಿನ ಮಾದರಿಯಲ್ಲೂ ಶಮಿ 108 ಪಂದ್ಯಗಳಿಂದ 24.05ರ ಸರಾಸರಿಯಲ್ಲಿ 206 ವಿಕೆಟ್ ಉರುಳಿಸಿ ಭಾರತದ ಪ್ರಮುಖ ಮ್ಯಾಚ್ ವಿನ್ನರ್ ಎನಿಸಿಕೊಂಡಿದ್ದಾರೆ.

ಭುವಿ 121 ಏಕದಿನಗಳಿಂದ 141 ವಿಕೆಟ್ ಪಡೆದಿದ್ದಾರೆ. ಕೇವಲ ಟಿ20 ಮಾದರಿಯಲ್ಲಿ ಮಾತ್ರ ಭುವಿ 87 ಪಂದ್ಯಗಳಿಂದ 90 ವಿಕೆಟ್ ಕಬಳಿಸಿ ಮುನ್ನಡೆಯಲ್ಲಿದ್ದರೆ, ಶಮಿ ಕೇವಲ 25 ಟಿ20 ಪಂದ್ಯಗಳನ್ನು ಆಡಿ 27 ವಿಕೆಟ್ ಪಡೆದಿದ್ದಾರೆ.

2023ರ ಏಕದಿನ ವಿಶ್ವಕಪ್ ಹಾಗೂ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಬೆಂಕಿ ಬೌಲಿಂಗ್ ಪ್ರದರ್ಶಿಸಿದ್ದ ಶಮಿ, ಮಾರ್ಚ್ 2025ರ ಬಳಿಕ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದಾರೆ. ಬುಮ್ರಾ ಜೊತೆಗೆ ಶಮಿ, ಸಿರಾಜ್ ಮುಂಬರುವ ವಿಶ್ವಕಪ್‌ಗೆ ಅತ್ಯಗತ್ಯ ಎಂದು ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರದಿಂದ ಆರಂಭವಾಗುವ ರಣಜಿ ಪಂದ್ಯದ ಮೇಲೆ ಮಾತ್ರ ನನ್ನ ಗಮನವಿದೆ ಎಂದು ಶಮಿ ಸಾರಿದ್ದಾರೆ.