BBK13: ‘ಬಿಗ್ ಬಾಸ್ ಕನ್ನಡ 11’ ರಿಯಾಲಿಟಿ ಶೋನಲ್ಲಿ ‘ರಾಕ್ಷಸರು ವರ್ಸಸ್ ಗಂಧರ್ವರು’ ಟಾಸ್ಕ್ ವೇಳೆ ಸ್ಪರ್ಧಿ ಮಂಜುನಾಥ್ ನಿಯಮ ಮೀರಿ ಪ್ರವರ್ತಿಸಿದ್ದು, ವೀಕ್ಷಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಟಾಸ್ಕ್‌ನಲ್ಲಾದ ಮಾತಿನ ಚಕಮಕಿಯಲ್ಲಿ ಯಶಸ್ ಹಾಗೂ ಅವರ ಪೋಷಕರನ್ನು ಉದ್ದೇಶಿಸಿ ಅತ್ಯಂತ ಕೆಟ್ಟ ಮಾತುಗಳಿಂದ ನಿಂದಿಸಿದ ಮಂಜ, ಸಾಲು ಸಾಲು ಅಸಭ್ಯ ಪದ ಬಳಸಿ ಸಭ್ಯತೆಯ ಗೆರೆ ದಾಟಿದ್ದಾರೆ.
ಟಾಸ್ಕ್ ಆರಂಭದಿಂದಲೂ ಯಶಸ್‌ಗೆ ‘ಸ್ತ್ರೀ ಮೋಹ’ ಹಾಗೂ ‘ಕಾಮ ಪಿಶಾಚಿ’ ಎಂದು ಚುಚ್ಚುತ್ತಿದ್ದ ಮಂಜ, ಪೇಂಟ್ ಟಾಸ್ಕ್‌ನಲ್ಲಿ ತಮ್ಮ ಬೋರ್ಡ್ ಮೇಲೆ ದಾಳಿ ನಡೆದಾಗ ಕೋಪದ ಭರದಲ್ಲಿ ಬಾಯಿಗೆ ಬಂದಂತೆ ಬೈದಿದ್ದಾರೆ. ಈ ವೇಳೆ ಪ್ರಸಾರವಾದ ಸಂಚಿಕೆಯಲ್ಲಿ ಪ್ರಸಾರಕರು ನಿರಂತರವಾಗಿ ಬೀಪ್ ಮತ್ತು ಮ್ಯೂಟ್ ಶಬ್ದಗಳನ್ನು ಬಳಸಬೇಕಾಯಿತು. ಈ ಹಿಂದೆಯೂ ಸೌಂದರ್ಯ ಹಾಗೂ ವೈಷ್ಣವಿ ವಿರುದ್ಧ ಚಾರಿತ್ರ್ಯವಧೆಕಾರಿ ಹೇಳಿಕೆ ನೀಡಿ ಕಿಚ್ಚ ಸುದೀಪ್ ಅವರಿಂದ ಎಚ್ಚರಿಕೆ ಪಡೆದಿದ್ದ ಮಂಜ, ಮತ್ತೆ ಅದೇ ಹಾದಿ ತುಳಿದಿದ್ದಾರೆ.
ಹಿಂದಿನ ಆವೃತ್ತಿಯಲ್ಲಿ ಮಹಿಳಾ ಸ್ಪರ್ಧಿಗಳಿಗೆ ನಿಂದಿಸಿದ್ದಕ್ಕಾಗಿ ಲಾಯರ್ ಜಗದೀಶ್ ಅವರನ್ನು ತಕ್ಷಣವೇ ಶೋನಿಂದ ಹೊರಹಾಕಲಾಗಿತ್ತು. ಅದೇ ಮಾದರಿಯಲ್ಲಿ, ಕುಟುಂಬ ಸಮೇತ ನೋಡುವ ಶೋನಲ್ಲಿ ವರ್ಬಲ್ ವೈಲೆನ್ಸ್ ನಡೆಸಿದ ಮಂಜ ಅವರಿಗೂ ರೆಡ್ ಕಾರ್ಡ್ ನೀಡಿ ಎಲಿಮಿನೇಟ್ ಮಾಡಬೇಕು ಎಂದು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪಟ್ಟು ಹಿಡಿದಿದ್ದಾರೆ. ಸುದೀಪ್ ಹಾಗೂ ಬಿಗ್ ಬಾಸ್ ತಂಡ ಮಂಜ ವಿರುದ್ಧ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ವಾರಾಂತ್ಯದ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.






















