SK Home Ad
Home ನಮ್ಮ ಜಿಲ್ಲೆ ಚಿತ್ರದುರ್ಗ ಸಿಎಂ ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ: ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

ಸಿಎಂ ಡಿಕೆಶಿ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ: ಸಂಸದ ಗೋವಿಂದ ಕಾರಜೋಳ ವಾಗ್ದಾಳಿ

0
57
(file Photo)

ಚಿತ್ರದುರ್ಗ: ಸಿಎಂ, ಸಚಿವರಿಗೆ ಸ್ಟಿಂಗ್ ಆಪರೇಷನ್ ಭೀತಿ ಇದೆ ಎಂಬ ಹೇಳಿಕೆ ವಿಚಾರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಾಳಿಯಲ್ಲಿ ಗುಂಡು ಹೊಡೆಯುವುದು ಬೇಡ ಎಂದು ಸಂಸದ ಗೋವಿಂದ ಕಾರಜೋಳ ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು, ಯಾರ ವಿರುದ್ಧ ಸ್ಟಿಂಗ್ ಮಾಡುತ್ತಾರೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡಲಿ. ಸ್ಟಿಂಗ್‌ಗೆ ಸಿಕ್ಕಿಹಾಕಿಕೊಂಡವರ ಪಟ್ಟಿ ನೀಡಲಿ. ಸ್ಟಿಂಗ್ ಪಿತಾಮಹನೇ ರಾಜ್ಯದ ಸಿಎಂ ಎಂದು ಜನ ಹೇಳುತ್ತಾರೆ. ದಾಖಲೆ ಬಿಡುಗಡೆಗೆ ಸಮಯ ಕೇಳುವುದು ಗಾಳಿಯಲ್ಲಿ ಗುಂಡು ಹೊಡೆದಂತೆ ಎಂದು ಲೇವಡಿ ಮಾಡಿದರು.

ರಾಜ್ಯದಲ್ಲಿ ಬರಗಾಲದಿಂದ ತೀವ್ರ ಸಂಕಷ್ಟದ ವಾತಾವರಣವಿದೆ. ಜನರ ಲಕ್ಷ್ಯ ಬೇರೆಡೆ ಸೆಳೆಯಲು ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಜನಪರವಾದ ನಯಾ ಪೈಸೆಯ ಕೆಲಸ ಆಗಿಲ್ಲ, ಅದನ್ನು ಮರೆಮಾಚಲು ಸರ್ಕಾರದಿಂದ ಈ ರೀತಿಯ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬ್ಯಾಲೆಟ್ ಬಳಸಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಆಗ್ರಹಿಸಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಮಾಡಿರುವ ವಿಚಾರಕ್ಕೂ ಕಾರಜೋಳ ಪ್ರತಿಕ್ರಿಯಿಸಿದರು.

ಸ್ವಾತಂತ್ರ್ಯ ಬಂದಾಗ ಬ್ಯಾಲೆಟ್ ಮೂಲಕ ಚುನಾವಣೆ ನಡೆಯುತ್ತಿತ್ತು. ಆಗ ಕೆಲವರಿಗೆ ಮತದಾನ ಮಾಡುವುದು ತಿಳಿದಿರಲಿಲ್ಲ. ಕೈಹಿಡಿದು ಮತದಾನ ಮಾಡಿಸುವ ವಾತಾವರಣ ಇತ್ತು. ಈಗ ಶೇ.80 ರಷ್ಟು ವಿದ್ಯಾವಂತರಿದ್ದಾರೆ, ಈಗ ಬ್ಯಾಲೆಟ್ ಅಗತ್ಯವಿಲ್ಲ. ಬ್ಯಾಲೆಟ್ ಬೇಕು ಎನ್ನುವುದು ಕಾಂಗ್ರೆಸ್ ಭಾರತೀಯ ನಾಗರಿಕರಿಗೆ ಮಾಡುವ ಅವಮಾನ ಎಂದು ಕಿಡಿಕಾರಿದರು.

ಇವಿಎಂ ಮೂಲಕವೇ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಗೆದ್ದಿದ್ದಾರೆ. ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಿರುವುದು ಇವಿಎಂ ಮೂಲಕವೇ. ಇವಿಎಂಗೆ ತಪ್ಪಿದ್ದರೆ ಕಾಂಗ್ರೆಸ್ಸಿಗರು ಮೊದಲು ರಾಜೀನಾಮೆ ನೀಡಲಿ. ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.