ಹಂಪಿ: ನೆವೆಂಬರ್‌ನಲ್ಲಿಯೇ ಹಂಪಿ ಉತ್ಸವ ನಡೆಸಬೇಕು ಎನ್ನುವ ನಿಮ್ಮ ಆಶಯದಂತೆ ಪ್ರಸಕ್ತ ವರ್ಷ ನವೆಂಬರ್ 2, 3, 4ರಂದು ಮತ್ತೆ ಹಂಪಿ ಉತ್ಸವ ಆಯೋಜನೆ ಮಾಡುವ ಮೂಲಕ ಹಿಂದಿನ ಸಂಪ್ರಾದಯಕ್ಕೆ ನಾಂದಿ ಹಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಹಂಪಿಯಲ್ಲಿ ಗಾಯಿತ್ರಿಪೀಠದ ಎಂಪಿ ಪ್ರಕಾಶ ಮುಖ್ಯ ವೇದಿಕೆಯಲ್ಲಿ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ- 2026ಕ್ಕೆ ಸಿಎಂ ಸಿದ್ದರಾಮಯ್ಯ ಡೊಳ್ಳು – ನಗಾರಿ ಬಾರಿಸುವ ಮೂಲಕ ಶುಕ್ರವಾರ ವಿದ್ಯುಕ್ತವಾಗಿ ಚಾಲನೆ ನೀಡಿದ ಬಳಿಕ ವಾಗ್ದಾನ ಮಾಡಿದರು.
ಎಂ.ಪಿ.ಪ್ರಕಾಶ ಅವರು ನವೆಂಬರ್‌ನಲ್ಲಿ ಹಂಪಿ ಉತ್ಸವ ಮಾಡಿಕೊಂಡು ಬಂದಿದ್ದರು. ನವೆಂಬರ್ 2, 3 ಮತ್ತು 4 ರಂದು ಹಂಪಿ ಉತ್ಸವ ಮಾಡಬೇಕು ಎಂಬುದು ವಿಜಯನಗರ ಜಿಲ್ಲೆಯ ಜನರು ಮತ್ತು ಜನಪ್ರತಿನಿಧಿಗಳ ಒತ್ತಾಸೆ ಆಗಿದೆ. ಫೆಬ್ರವರಿಯಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುತ್ತವೆ. ಇದರಿಂದ ನವೆಂಬರ್ ಉತ್ತಮ ಎಂಬುದು ನನಗೂ ಮನವರಿಕೆ ಆಗಿದೆ. ಮುಂದಿನ ಬಾರಿ ನವೆಂಬರ್‌ನಲ್ಲೇ ಹಂಪಿ ಉತ್ಸವ ಆಚರಿಸುತ್ತೇವೆ ಎಂದು ನಾನು ಘೋಷಣೆ ಮಾಡುತ್ತೇನೆ. ಇದೇ ವರ್ಷದಿಂದಲೇ ಅದನ್ನು ಅನುಷ್ಠಾನ ಮಾಡಲಿದ್ದೇವೆ ಎಂದರು.
ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!
ರಾಜ್ಯ ಸರ್ಕಾರ ಹಂಪಿ ಉತ್ಸವ 2026 ವನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಮಾಜಿ ಸಚಿವ ದಿವಂಗತ ಎಂ.ಪಿ. ಪ್ರಕಾಶ್ ಅವರು ಹಿಂದೆ ಕನ್ನಡ ಮತ್ತು ಸಂಸ್ಕೃತಿಯ ಸಚಿವರಾಗಿದ್ದ ಸಂದರ್ಭದಲ್ಲಿ, ಮೈಸೂರು ದಸರಾ ಉತ್ಸವದ ವಿಜೃಂಭಣೆಯನ್ನು ಮನಗಂಡು, ಇದೇ ರೀತಿಯ ಉತ್ಸವವನ್ನು ಹಂಪಿಯಲ್ಲಿಯೂ ನೆರವೇರಿಸಬೇಕೆಂದು ಆಶಿಸಿದ್ದರು. ಎಂ.ಪಿ. ಪ್ರಕಾಶ್ ಅವರು, ಕನ್ನಡ ನಾಡು ನುಡಿ, ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ವಹಿಸಿದ್ದರು. ಈ ರೀತಿಯ ಅದ್ದೂರಿ ಹಂಪಿ ಉತ್ಸವದ ಆಚರಣೆಗೆ ಮೂಲಕಾರಣ ಎಂ.ಪಿ. ಪ್ರಕಾಶ್ ಅವರು. ಅವರೊಬ್ಬ ಅಪರೂಪದ ವ್ಯಕ್ತಿ ಎಂದರು.
ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ ಸಂಸ್ಕೃತಿ ಕಲೆಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ. ವಿದೇಶಿ ಪ್ರವಾಸಿಗ ಅಬ್ದುಲ್ ರಜಾಕ್, ವಿಜಯನಗರ ಶ್ರೀಮಂತವಾದ ಸ್ಥಳವಾಗಿತ್ತು ಎಂದು ಉಲ್ಲೇಖಿಸಿದ್ದನ್ನು ಸಿಎಂ ಸ್ಮರಿಸಿದರು.
ಸಮಸಮಾಜ ನಿರ್ಮಾಣ: ಸಮಾಜದಲ್ಲಿ ಬಡವ ಶ್ರೀಮಂತ, ಉತ್ತಮ ಮತ್ತು ಕೆಳ ಜಾತಿಗಳೆಂಬ ಬೇಧವಿದೆ. ಸಂವಿಧಾನ ಇರದೇ ಹೋಗಿದ್ದರೆ, ಸಮಾನ ಅವಕಾಶಗಳು ದೊರೆಯಲು ಸಾಧ್ಯವಾಗುತ್ತಿರಲಿಲ್ಲ. ಸಮಾಜದ ಅಸಮಾನತೆಯನ್ನು ತೊಡೆದುಹಾಕಿದರೆ ಸಮಸಮಾಜ ನಿರ್ಮಾಣ ಸಾಧ್ಯ. 2013 ರಲ್ಲಿ ಮತ್ತು 2023 ರಲ್ಲಿ ಮುಖ್ಯಮಂತ್ರಿಯಾಗಿ ನಾನು ತಂದಿರುವ ಕಾರ್ಯಕ್ರಮಗಳು ಅಸಮಾನತೆಯ ನಿವಾರಣೆಗೆ ತಂದವುಗಳಾಗಿವೆ. ಸಮಸಮಾಜ ನಿರ್ಮಿಸಿದಾಗ ಮಾತ್ರ ದುರ್ಬಲವರ್ಗದವರೂ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಇದನ್ನೂ ಓದಿ: ಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ
ನಮ್ಮ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದು, 2023 ರಿಂದಲೂ ಗ್ಯಾರಂಟಿ ಯೋಜನೆಗಳನ್ನು ನೀಡಿ, ಅಸಮಾನತೆಯನ್ನು ನಿವಾರಿಸುವ ಉದ್ದೇಶ ಹೊಂದಿದೆ. ಜನರಿಗೆ ಆರ್ಥಿಕ , ಸಾಮಾಜಿಕ ಶಕ್ತಿಯನ್ನು ಸಾಧ್ಯವಾಗಿಸದೇ ಇದ್ದರೆ, ಜಾತಿ ವ್ಯವಸ್ಥೇ ಹೋಗಲಾಡಿಸಬಹುದು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ಸುಮಾರು 60 ಸಾವಿರ ರೂ.ಗಳ ಆರ್ಥಿಕ ಬಲವನ್ನು ತುಂಬುತ್ತಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಕೊಂಡುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತಿದೆ. ಜಾತಿವ್ಯವಸ್ಥೆ ಇಲ್ಲವಾಗಲು ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಸ್ವಾತಂತ್ರ‍್ಯ ಬರಬೇಕು ಎಂದರು.
ಬದ್ದತೆಯ ಸರಕಾರ: ಸರ್ಕಾರ ಆಚರಿಸುವ ಚಾಲುಕ್ಯ ಉತ್ಸವ, ಹಂಪಿ ಉತ್ಸವ, ಕಿತ್ತೂರು ಉತ್ಸವ, ಆನೆಗುಂದಿ ಉತ್ಸವ, ಬನವಾಸಿ, ಮೈಸೂರು ದಸರಾ, ಕರಾವಳಿ ಉತ್ಸವ ಗಳ ಮೂಲಕ ನಾಡಿನ ಸಾಹಿತ್ಯ, ಕಲೆ, ಸಂಗೀತ ಪರಂಪರೆಗಳನ್ನು ಸಂರಕ್ಷಿಸುವ ದಿಸೆಯಲ್ಲಿ ಮುಖ್ಯವಾಗಿದೆ. ಮುಂದಿನ ಪೀಳಿಗೆಗೆ ಕನ್ನಡದ ಶ್ರೀಮಂತ ಪರಂಪರೆ ಕೊಂಡೊಯ್ಯವ ದಿಸೆಯಲ್ಲಿ ಸರ್ಕಾರ ಎಲ್ಲ ರೀತಿಯ ನೆರವು ನೀಡಲು ಬದ್ಧವಾಗಿದೆ. ನಮ್ಮದು ಬದ್ಧತೆಯ ಸರಕಾರ ಎಂದರು.























