ಭದ್ರಾವತಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಕೆರೆಗೆ ಇಳಿದಿದ್ದ ಪದವಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ದೇವರಹಳ್ಳಿ ಚೌಡೇಶ್ವರಿ ದೇವಸ್ಥಾನ ಸಮೀಪದ ಕೆರೆಯಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತಪಟ್ಟ ವಿದ್ಯಾರ್ಥಿಯನ್ನು ರಂಗನಾಥಪುರ (ಗುಂಡಪ್ಪ ಕ್ಯಾಂಪ್) ನಿವಾಸಿ ರಾಕೇಶ್ (20) ಎಂದು ಗುರುತಿಸಲಾಗಿದೆ. ಗ್ರಾಮದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ರಾತ್ರಿ ಸುಮಾರು 1 ಗಂಟೆ ಸಮಯದಲ್ಲಿ ಈ ದುರ್ಘಟನೆ ನಡೆದಿದೆ.
ಗಣೇಶ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸುವಾಗ ಮೂರ್ತಿಯು ವಾಲಿದ ಸಂದರ್ಭದಲ್ಲಿ ಆಯತಪ್ಪಿ ನೀರಿನೊಳಗೆ ಮುಳುಗಿದ್ದಾರೆ ಎನ್ನಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ರಾತ್ರಿ ಸುಮಾರು 2 ಗಂಟೆಯ ವೇಳೆಗೆ ಸ್ಥಳಕ್ಕೆ ಆಗಮಿಸಿ, ಬೆಳಗಿನ ಜಾವದವರೆಗೆ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದರು.
ಬಳಿಕ ಮುಳುಗು ತಜ್ಞ ಈಶ್ವರ್ ಮಲ್ಪೆ ಅವರ ನೇತೃತ್ವದ ತಂಡವೂ ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯದಲ್ಲಿ ಪಾಲ್ಗೊಂಡಿತ್ತು. ಈ ಕಾರ್ಯಾಚರಣೆಯಲ್ಲಿ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ, ಅಗ್ನಿಶಾಮಕದಳದ ಸಿಬ್ಬಂದಿಗಳಾದ ಆನಂದ್, ಸುರೇಶ್, ಮಹೇಂದ್ರ, ಪ್ರಜ್ವಲ್, ಸಂತೋಷ್ ಭಾಗಿಯಾಗಿದ್ದರು.
ನಿರಂತರ ಶೋಧದ ಬಳಿಕ ರಾಕೇಶ್ ಮೃತದೇಹ ಪತ್ತೆಯಾಗಿದ್ದು, ನೀರಿನಿಂದ ಹೊರತೆಗೆದು ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮೃತದೇಹದ ಪರೀಕ್ಷೆ ನಡೆಸುವ ಮೂಲಕ ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ.






















