ಶಿವಮೊಗ್ಗ: ಕಾಂಗ್ರೆಸ್ನವರು ಸ್ಟಿಂಗ್ ಆಪರೇಷನ್ ಮೂಲಕ ರಾಜ್ಯದ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಹಾಕಿದ್ದು, ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮತ್ತೊಬ್ಬರನ್ನು ಕುರ್ಚಿಯಲ್ಲಿ ಕೂರಿಸಲು ಸ್ಟಿಂಗ್ ಆಪರೇಷನ್ ಮಾಡಬೇಕಿತ್ತೇ..? ಒಬ್ಬ ಮುಖ್ಯಮಂತ್ರಿಯನ್ನು ಬದಲಿಸುವ ವಿಚಾರದಲ್ಲಿ ರಾಜ್ಯದ ಮರ್ಯಾದೆಯನ್ನು ದೇಶದ ಮುಂದೆ ಹರಾಜು ಹಾಕಬೇಕಿತ್ತೇ? ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆಯಲ್ಲಿ ಐವರು ಸಚಿವರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ರಾಜ್ಯದ ನೈತಿಕತೆಯ ಬಗ್ಗೆ ಮುಖ್ಯಮಂತ್ರಿಗೆ ಕಲ್ಪನೆಯಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಅವರಿಗೆ ಜೈಕಾರ ಹಾಕುತ್ತಿದ್ದವರು ಈಗ ಎಲ್ಲಿದ್ದಾರೆ…? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಸಿದ್ದರಾಮಯ್ಯ ಅವರತ್ತ ಗಮನ ಹರಿಸುತ್ತಿಲ್ಲ ಎಂದು ಟೀಕಿಸಿದರು.
ಸಿದ್ದರಾಮಯ್ಯನವರ ಜೊತೆಗಿದ್ದವರಿಂದಲೇ ಈ ಕೃತ್ಯ ನಡೆದಿದೆ. ಪೊಲೀಸ್ ಇಲಾಖೆಯ ಬಗ್ಗೆ ಗೌರವವಿದೆ. ಆದರೂ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಸಚಿವರು ಪ್ರಭಾವಿಯಾಗಿರುವಾಗ ಪೊಲೀಸರಿಂದ ತನಿಖೆ ಹೇಗೆ ಸಾಧ್ಯ ಎಂದರು.
ಸ್ಟಿಂಗ್ನಿಂದ ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ. 2028ರಲ್ಲಿ ನೈತಿಕತೆಯ ಮೇಲೆ ಚುನಾವಣೆ ನಡೆಯಲಿದೆ. ಹೌದು ಹುಲಿಯಾ.. ಈಗ ಎಲ್ಲಿದ್ದಾರೆ..? ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ಕಾಂಗ್ರೆಸ್ನ ಯಾವೊಬ್ಬ ಸಚಿವರೂ ಉತ್ತರ ನೀಡುತ್ತಿಲ್ಲ ಯಾಕೆ ಎಂದರು.






















