SK Home Ad
Home ಸುದ್ದಿ Samyukta Karnataka News Live: ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ “Tr.” ಗೌರವಸೂಚಕ ಪದ...

Samyukta Karnataka News Live: ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ “Tr.” ಗೌರವಸೂಚಕ ಪದ ಬಳಕೆ

0
534

ಸಿಜೆಐ ಸೂರ್ಯ ಕಾಂತ್ ಮಹತ್ವದ ಘೋಷಣೆ – ಸುಪ್ರೀಂ ಕೋರ್ಟ್‌ನಲ್ಲಿ ಪ್ರತಿ ತಿಂಗಳು ಕಾನೂನು ಉಪನ್ಯಾಸ : ಕಾನೂನು, ನ್ಯಾಯ ಮತ್ತು ಕಾನೂನು ಶಿಕ್ಷಣಕ್ಕೆ ಸಂಬಂಧಿಸಿದ ಸಮಕಾಲೀನ ವಿಚಾರಗಳ ಕುರಿತು ಸಂವಾದ ಹಾಗೂ ವಿಚಾರ ವಿನಿಮಯಕ್ಕೆ ಹೊಸ ವೇದಿಕೆ ಕಲ್ಪಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಮಾಸಿಕ ಉಪನ್ಯಾಸ ಸರಣಿಯನ್ನು ಆರಂಭಿಸಲಿದೆ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಘೋಷಿಸಿದ್ದಾರೆ. ಶಿಕ್ಷಕರ ದಿನವಾದ ಸೆಪ್ಟೆಂಬರ್ 5ರಂದು ಈ ಮಹತ್ವದ ಘೋಷಣೆ ಮಾಡಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಡಾರ್ಲಿಂಗ್ ಕೃಷ್ಣ, ಐಂದ್ರಿತಾ ರೈ ಸಮ್ಮುಖದಲ್ಲಿ KSPL ಸೀಸನ್-3 ಆರಂಭ : ಬೆಂಗಳೂರಿನ ಗಾಯತ್ರಿ ವಿಹಾರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (KSPL) ಸೀಸನ್-3ಕ್ಕೆ ಖ್ಯಾತ ನಟ ಡಾರ್ಲಿಂಗ್ ಕೃಷ್ಣ, ನಟಿ ಐಂದ್ರಿತಾ ರೈ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಲೀಗ್‌ನಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿದ್ದು, 63 ಪಂದ್ಯಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಕ್ರೀಡೆಯಾಗಿದ್ದು, ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ದೊಡ್ಡ ವೇದಿಕೆ ಕಲ್ಪಿಸುವ KSPL ತಂಡದ ಪ್ರಯತ್ನ ಶ್ಲಾಘನೀಯ ಎಂದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ನೇಮಕಾತಿ, ಅರ್ಜಿ ತಿದ್ದುಪಡಿಗೆ ಅವಕಾಶ – ಗಡುವು ವಿಸ್ತರಣೆ : ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಮಹತ್ವದ ಸೇರ್ಪಡೆ ಅಧಿಸೂಚನೆಯನ್ನು ಸೆಪ್ಟೆಂಬರ್ 4, 2026ರಂದು ಪ್ರಕಟಿಸಿದ್ದು, ಕೆಲವು ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ತಿದ್ದುಪಡಿ ಹಾಗೂ ಅಗತ್ಯ ಪ್ರಮಾಣಪತ್ರಗಳನ್ನು ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪಿಯು ಉಪನ್ಯಾಸಕರಿಗೆ ಗುಡ್‌ನ್ಯೂಸ್ – ಪ್ರಾಂಶುಪಾಲರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ : ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೂಪ್‌-‘ಎ’ ವೃಂದದ ಪ್ರಾಂಶುಪಾಲರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಪದವಿ ಪೂರ್ವ) ಅರ್ಹ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ. ಉಳಿಕೆ ಮೂಲ ವೃಂದದ ಒಟ್ಟು 216 ಪ್ರಾಂಶುಪಾಲರ ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅರ್ಹ ಉಪನ್ಯಾಸಕರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬೀರೂರಿನಲ್ಲಿ ಸಿ.ಟಿ.ರವಿಗೆ ರಾಜಕೀಯ ತಿರುಗೇಟು – ಸಿದ್ದರಾಮಯ್ಯ ನಿರ್ಧಾರ ಸಮರ್ಥನೆ : “ತಮ್ಮಯ್ಯಾ… ಯಾರಯ್ಯಾ ನಿನ್ನ ಮೇಲೆ ಸೋತದ್ದು ಸಿ.ಟಿ.ರವಿ…” — ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕೇಳಿಬಂದ ಈ ರಾಜಕೀಯ ವ್ಯಂಗ್ಯದ ಮಾತುಗಳು ಇದೀಗ ಗಮನ ಸೆಳೆದಿವೆ. ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ನಾಯಕರು, ಗೃಹಲಕ್ಷ್ಮಿ ಯೋಜನೆ ಸೇರಿದಂತೆ ಕಾಂಗ್ರೆಸ್ ಸರ್ಕಾರದ ಆಡಳಿತ ಮತ್ತು ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಬೆಳವಣಿಗೆಗಳ ಬಗ್ಗೆ ವ್ಯಂಗ್ಯವಾಡಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಚಲೋ ನಡುವೆ ಆಘಾತ – ರಸ್ತೆ ಅಪಘಾತದಲ್ಲಿ ಮಹಾವೀರ ಗುಡಾಜ ನಿಧನ : ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದ ಸಕ್ರಿಯ ಪದಾಧಿಕಾರಿ ಹಾಗೂ ನಿಷ್ಠಾವಂತ ಕಾರ್ಯಕರ್ತ ಮಹಾವೀರ ಗುಡಾಜ ಅವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಬಳ್ಳಾರಿ ಚಲೋ 5ನೇ ದಿನಕ್ಕೆ – ಕಾರಟಗಿಯಿಂದ ಮುಂದುವರಿದ ಬಿಜೆಪಿ ಜನಾಂದೋಲನ : ಕಾಂಗ್ರೆಸ್ ಸರ್ಕಾರದ ವಿರುದ್ಧದ ಆರೋಪಗಳು ಹಾಗೂ ವಿವಿಧ ಜನಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ಬಿಜೆಪಿ ಹಮ್ಮಿಕೊಂಡಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಶನಿವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಾಗುತ್ತಿರುವ ಯಾತ್ರೆ ಕಾರಟಗಿ ಮೂಲಕ ಬಳ್ಳಾರಿಯತ್ತ ಮುಂದುವರಿದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸರಕು ಸಾಗಣೆಗೆ ರೈಲ್ವೆ ಹೊಸ ಬಲ – ಬೆಂಗಳೂರಿನಿಂದ ದೆಹಲಿಗೆ ವಾರದ ಕಂಟೇನರ್ ರೈಲು : ದೇಶೀಯ ಸರಕು ಸಾಗಣೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಬೆಂಗಳೂರಿನ ವೈಟ್‌ಫೀಲ್ಡ್ ರೈಲು ನಿಲ್ದಾಣದಿಂದ ನವದೆಹಲಿಯ ತುಘಲಕಾಬಾದ್‌ಗೆ ಹೊಸ ವಾರದ ಕಂಟೇನರ್ ರೈಲು ಸೇವೆಗೆ ಇಂದು ಚಾಲನೆ ನೀಡಲಾಗಿದೆ. ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ವೈಟ್‌ಫೀಲ್ಡ್‌ನಲ್ಲಿ ಸೇವೆಗೆ ಚಾಲನೆ ನೀಡಿದ್ದು, ದಕ್ಷಿಣ ಭಾರತದ ಕೈಗಾರಿಕಾ ವಲಯಗಳಿಗೆ ದೆಹಲಿ–ಎನ್‌ಸಿಆರ್‌ನ ದೊಡ್ಡ ಮಾರುಕಟ್ಟೆಗಳಿಗೆ ವೇಗವಾದ ಹಾಗೂ ವಿಶ್ವಾಸಾರ್ಹ ಸರಕು ಸಾಗಣೆ ಸಂಪರ್ಕ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಕರ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತರ ಕನ್ನಡಕ್ಕೆ 3ನೇ ಸ್ಥಾನ: ಶಿಕ್ಷಕರ ಪ್ರಾಮಾಣಿಕ ಸೇವೆ ಮತ್ತು ಪರಿಶ್ರಮದ ಫಲವಾಗಿ ಉತ್ತರ ಕನ್ನಡ ಜಿಲ್ಲೆ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿ ಮೂರನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು  ಸಹಕಾರ ಇಲಾಖೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ  ಸವದಿ ಹೇಳಿದರು. ಅವರು ಶನಿವಾರ, ಅಂಕೋಲಾದ ನಾಡವರ ಸಭಾಭವನದಲ್ಲಿ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಉಪನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ, ಉತ್ತರ ಕನ್ನಡ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಅಂಕೋಲಾ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತರ ಕನ್ನಡ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಿವೃತ್ತಿ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕದ ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘ ಗೌರವಸೂಚಕ ಪದ : ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಶಿಕ್ಷಕರಿಗೆ ವಿಶೇಷ ಗೌರವ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ (Teacher) ಎಂಬ ಗೌರವಸೂಚಕ ಪದವನ್ನು ಹೆಮ್ಮೆಯಿಂದ ಬಳಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ 2026 – 69 ಶಿಕ್ಷಕರು, ಅಧ್ಯಾಪಕರಿಗೆ ರಾಷ್ಟ್ರಪತಿ ಮುರ್ಮು ಗೌರವ : ಗುಣಮಟ್ಟದ ಶಿಕ್ಷಣದ ಮೂಲಕವೇ ‘ವಿಕಸಿತ ಭಾರತ’ದ ಗುರಿ ಸಾಧಿಸಲು ಸಾಧ್ಯ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ 2026ರಲ್ಲಿ ಮಾತನಾಡಿದ ಅವರು, ಶಿಕ್ಷಕರನ್ನು ಗೌರವಿಸುವ ಸಮಾಜವು ನಿಜವಾದ ಅರ್ಥದಲ್ಲಿ ಪ್ರಗತಿಪರ ಸಮಾಜವಾಗಿದೆ ಎಂದು ಹೇಳಿದರು. ಶೈಕ್ಷಣಿಕ ಶ್ರೇಷ್ಠತೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ದೇಶದ ಅಭಿವೃದ್ಧಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ರಾಷ್ಟ್ರಪತಿ ಒತ್ತಿ ಹೇಳಿದರು. ಭಾರತವನ್ನು ಕೇವಲ ಜ್ಞಾನ ಶಕ್ತಿಯಾಗಿ ಮಾತ್ರವಲ್ಲದೆ, ವಿಶ್ವದ ಕೌಶಲ್ಯ ರಾಜಧಾನಿಯಾಗಿ ರೂಪಿಸುವುದು ದೇಶದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಸರ್ಕಾರಿ ಕಚೇರಿ ಅಲೆದಾಟಕ್ಕೆ ಬ್ರೇಕ್ – ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ : ಸಾರ್ವಜನಿಕರು ತಮ್ಮ ಸಣ್ಣಪುಟ್ಟ ಕೆಲಸಗಳು ಹಾಗೂ ವಿವಿಧ ಸರ್ಕಾರಿ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಆಡಳಿತವನ್ನು ಜನರ ಮನೆಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಚಾಲನೆ ನೀಡಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮೋಹನ್‌ಲಾಲ್ ‘ಆಪರೇಷನ್ ಗಂಗಾ’ ಸಿನಿಮಾ ಘೋಷಣೆ : ಮಲಯಾಳಂ ಚಿತ್ರರಂಗದ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಮುಂದಿನ ಬಹುನಿರೀಕ್ಷಿತ ಚಿತ್ರಕ್ಕೆ ‘ಆಪರೇಷನ್ ಗಂಗಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಚಿತ್ರದ ಅಧಿಕೃತ ಘೋಷಣೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ವಿಷ್ಣು ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಇದು ಇವರಿಬ್ಬರ ಮೊದಲ ಸಹಯೋಗವಾಗಿದೆ. ಇತ್ತೀಚಿನ ಘೋಷಣೆಯೊಂದಿಗೆ ಈ ಹಿಂದೆ ತಾತ್ಕಾಲಿಕವಾಗಿ L367 ಎಂದು ಕರೆಯಲಾಗುತ್ತಿದ್ದ ಯೋಜನೆಗೆ ಹೊಸ ಗುರುತು ಸಿಕ್ಕಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲಿ ಮೊದಲ ಬಾರಿಗೆ ಜಪಾನ್‌ನ F-2A ಯುದ್ಧವಿಮಾನ : ಭಾರತ ಮತ್ತು ಜಪಾನ್ ನಡುವಿನ ರಕ್ಷಣಾ ಸಹಕಾರ ಮತ್ತಷ್ಟು ಗಟ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ ಎರಡನೇ ಆವೃತ್ತಿಯ ದ್ವಿಪಕ್ಷೀಯ ವಾಯುಸೇನೆ ಸಮರಾಭ್ಯಾಸ ‘ವೀರ್ ಗಾರ್ಡಿಯನ್ 26’ ಸೆಪ್ಟೆಂಬರ್ 9ರಿಂದ ರಾಜಸ್ಥಾನದ ಜೋಧಪುರ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ಈ ಬಾರಿಯ ಅಭ್ಯಾಸದ ಪ್ರಮುಖ ವಿಶೇಷತೆಯೆಂದರೆ, ಜಪಾನ್‌ನ ಯುದ್ಧವಿಮಾನಗಳು ಮೊದಲ ಬಾರಿಗೆ ಭಾರತೀಯ ವಾಯುನೆಲೆಯಿಂದ ಜಂಟಿ ತರಬೇತಿಯಲ್ಲಿ ಭಾಗವಹಿಸಲಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹುಬ್ಬಳ್ಳಿಯಿಂದ ಗಣೇಶ ಚತುರ್ಥಿಗೆ 312 ಹೆಚ್ಚುವರಿ ವಿಶೇಷ ಬಸ್ ಕಾರ್ಯಾಚರಣೆ : 026ನೇ ಸಾಲಿನ ಗಣೇಶ ಚತುರ್ಥಿ ಪ್ರಯುಕ್ತ ಸಾರ್ವಜನಿಕರು ತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ 312 ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ವಿಶೇಷ ಬಸ್‌ಗಳು ಸಂಚರಿಸಲಿವೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

KPSC ಪರೀಕ್ಷಾ ಅಕ್ರಮ – ಯುವಕರ‌ ಭವಿಷ್ಯದೊಂದಿಗೆ ಚೆಲ್ಲಾಟ ಸಹಿಸುವುದಿಲ್ಲ: ಕೆ.ಪಿ.ಎಸ್.ಸಿ ಪರೀಕ್ಷಾ ಅಕ್ರಮದಲ್ಲಿ ಯಾರೇ ಭಾಗಿಯಾದರು ರಕ್ಷಿಸುವ ಪ್ರಶ್ನೆಯೇ ಇಲ್ಲ. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ರಾಜ್ಯದ ಗೃಹ  ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪರೀಕ್ಷಾ ಅಕ್ರಮದಲ್ಲಿ ಬಾಗಿಯಾದವರು ಎಷ್ಟೆ ಬಲಿಷ್ಟವಾದರು, ಯಾವುದೇ ಪಕ್ಷದವರಾದರು ಸರಿ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಕಲ್ಪಿಸಲು ಬದ್ಧ ಎಂದ ಅವರು, ತಾವೇ ರಾಜ್ಯದ ಗೃಹ ಸಚಿವರಿರುವಾಗ ಯಾವುದೇ ಸಾಕ್ಷಿ ದುರ್ಬಲಗೊಳಿಸಲು‌ ಸಹ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಯಶವಂತಪುರದಿಂದ ಮಂಗಳೂರಿಗೆ ವಂದೇ ಭಾರತ್ ಟ್ರಯಲ್ ರನ್ – ಪ್ರಯಾಣದ ಸಮಯ ಲೆಕ್ಕಾಚಾರ : ಯಶವಂತಪುರ–ಮಂಗಳೂರು ಸೆಂಟ್ರಲ್ ನಡುವೆ 16 ಬೋಗಿಗಳ ವಂದೇ ಭಾರತ್ ರೈಲಿನ ಟ್ರಯಲ್ ರನ್ ಆರಂಭವಾಗಿದೆ. ಪ್ರಯಾಣದ ಸಮಯ ಮತ್ತು ಕಾರ್ಯಾಚರಣಾ ಸಾಧ್ಯತೆ ಪರಿಶೀಲಿಸಿದ ಬಳಿಕ ನಿಯಮಿತ ಸೇವೆಯ ವೇಳಾಪಟ್ಟಿ ಅಂತಿಮಗೊಳ್ಳಲಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಮಿಳುನಾಡಿನ ವಿದ್ಯಾರ್ಥಿಗಳಿಗೆ ಕೇರಳದಲ್ಲಿ ದುರಂತ ಅಂತ್ಯ – ಲಾರಿಗೆ ಕಾರು ಡಿಕ್ಕಿ, 8 ಮಂದಿ ಸಾವು : ಕೇರಳದ ತ್ರಿಶೂರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡಿನ ದಿಂಡಿಗಲ್‌ನ ಎಂಜಿನಿಯರಿಂಗ್ ಕಾಲೇಜಿನ ಎಂಟು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಕೈಪಮಂಗಲಂನ ಪಣಂಬಿಕ್ಕುನ್ನು ಸೆಂಟರ್ ಬಳಿ ರಾತ್ರಿ ಸುಮಾರು 11.40ಕ್ಕೆ ಅಪಘಾತ ಸಂಭವಿಸಿದೆ. ತಮಿಳುನಾಡು ನೋಂದಣಿಯ ಕಾರು ಗುರುವಾಯೂರಿನಿಂದ ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಸರಕು ಸಾಗಣೆ ಲಾರಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದವರನ್ನು ಹೊರತೆಗೆಯಲು ರಕ್ಷಣಾ ಸಿಬ್ಬಂದಿ ಕಾರಿನ ಭಾಗಗಳನ್ನು ಕತ್ತರಿಸಬೇಕಾಯಿತು. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ರಾಷ್ಟ್ರೀಯ ಶಿಕ್ಷಕರಿಗೆ ಮೋದಿ ಆತಿಥ್ಯ – ಶಿಕ್ಷಣದ ಹೊಸ ವಿಧಾನಗಳ ಕುರಿತು ಚರ್ಚೆ : ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರೊಂದಿಗೆ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸಂವಾದ ನಡೆಸಿದರು. ನವೀನ ಬೋಧನಾ ವಿಧಾನ, NEP, ತಾಯ್ನುಡಿ ಶಿಕ್ಷಣ ಸೇರಿದಂತೆ ಹಲವು ವಿಚಾರ ಚರ್ಚೆಯಾದವು. ರಾಷ್ಟ್ರೀಯ ಶಿಕ್ಷಕರ ಪ್ರಶಸ್ತಿ ಪುರಸ್ಕೃತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಅವರೊಂದಿಗೆ ನೇರವಾಗಿ ಸಂವಾದ ನಡೆಸಿರುವುದು ಶಿಕ್ಷಕರ ಸೇವೆಯನ್ನು ಗೌರವಿಸುವ ವಿಶೇಷ ಸಂದರ್ಭವಾಗಿದೆ. ದೇಶದ ಮುಂದಿನ ಪೀಳಿಗೆಯನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿರುವ ಈ ಸಂವಾದ ಗಮನ ಸೆಳೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

(ಮಾಹಿತಿ ಅಪ್​ಡೇಟ್ ಆಗಲಿದೆ)

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.