ChatGPT ತಯಾರಕ OpenAI ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿ GPT-6 Astra ಅನ್ನು ಬಿಡುಗಡೆ ಮಾಡಿದೆ ಎಂದು ಘೋಷಿಸಿದೆ. OpenAI ಪ್ರಕಾರ ಇದು ಇಲ್ಲಿಯವರೆಗೆ ಅಭಿವೃದ್ಧಿಪಡಿಸಿರುವ ಅತ್ಯಂತ ಸಾಮರ್ಥ್ಯಯುತ AI ಮಾದರಿಯಾಗಿದೆ. ಈ ಹೊಸ ಮಾದರಿ ವೃತ್ತಿಪರ ಕೆಲಸಗಳು, ವಿಜ್ಞಾನ, ಕೋಡಿಂಗ್ ಹಾಗೂ ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗಿದೆ.
OpenAI ಸಿಇಒ ಸ್ಯಾಮ್ ಆಲ್ಟ್ಮನ್ ಅವರು X ವೇದಿಕೆಯಲ್ಲಿ GPT-6 Astra ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕಂಪ್ಯೂಟರ್‌ನಲ್ಲಿ ಬಳಸಬಹುದಾದ ಅತ್ಯುತ್ತಮ AI ಮಾದರಿಗಳಲ್ಲಿ ಇದು ಪ್ರಮುಖ ಸ್ಥಾನ ಪಡೆಯಲಿದೆ ಎಂದು ಅವರು ಹೇಳಿದ್ದಾರೆ. ಉದ್ಯಮ ಶೀಲತೆ, ವೈಜ್ಞಾನಿಕ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳ ನಿರ್ಮಾಣದಲ್ಲೂ ಇದರ ಬಳಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.
OpenAI ಅಧ್ಯಕ್ಷ ಗ್ರೆಗ್ ಬ್ರಾಕ್ಮನ್ ಮಾಧ್ಯಮ ಸಂವಾದದಲ್ಲಿ, ನಾವು ಈಗ AGI (Artificial General Intelligence) ಯುಗಕ್ಕೆ ಕಾಲಿಟ್ಟಿದ್ದೇವೆ ಎಂದು ಭಾವಿಸುವುದು ತಪ್ಪಲ್ಲ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ GPT-6 Astra ಬಿಡುಗಡೆಯನ್ನು AI ಕ್ಷೇತ್ರದ ಪ್ರಮುಖ ಮೈಲಿಗಲ್ಲು ಎಂದು ಪರಿಗಣಿಸುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನೂ ಅವರು ವ್ಯಕ್ತಪಡಿಸಿದ್ದಾರೆ.
GPT-6 Astra ಸಾಫ್ಟ್‌ವೇರ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಅತ್ಯಂತ ಪರಿಣಾಮಕಾರಿ ಮಾದರಿಯಾಗಿದೆ ಎಂದು OpenAI ಹೇಳಿದೆ. ಕೋಡಿಂಗ್ ಕಾರ್ಯಗಳನ್ನು ಪೂರ್ಣಗೊಳಿಸುವುದರ ಜೊತೆಗೆ, ಸಾಫ್ಟ್‌ವೇರ್‌ನಲ್ಲಿರುವ ದೋಷಗಳನ್ನು ಗುರುತಿಸುವುದು, ಟರ್ಮಿನಲ್ ಕಾರ್ಯಗಳನ್ನು ನಿರ್ವಹಿಸುವುದು ಮತ್ತು ಕೋಡ್ ಬೇಸ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.
ಅಷ್ಟೇ ಅಲ್ಲದೆ ಸೈಬರ್ ಭದ್ರತೆ ಮತ್ತು ಸಾಫ್ಟ್‌ವೇರ್ ದೋಷಗಳನ್ನು ಪತ್ತೆ ಹಚ್ಚುವ ಕ್ಷೇತ್ರದಲ್ಲೂ GPT-6 Astra ಉತ್ತಮ ಸಾಮರ್ಥ್ಯ ತೋರಿಸಿದೆ ಎಂದು ಕಂಪನಿ ತಿಳಿಸಿದೆ. Astra ಸೈಬರ್ ಭದ್ರತೆಯಲ್ಲಿ ಬೇರೆ ಪ್ಲಾಟ್ ಫಾರ್ಮಕ್ಕಿಂತ ಪರಿಣಾಮಕಾರಿಯಾಗಿದೆ. Astra, ExploitBench ಮಾಡೆಲ್‌ನ ಬಿಡುಗಡೆ ನಂತರ ಶೇ.100 ಅಂಕ ಗಳಿಸಿದೆ. ಇದೇ ಪರೀಕ್ಷೆಯಲ್ಲಿ GPT-5.6 Sol ಶೇ.78.5 ಅಂಕ ಗಳಿಸಿತ್ತು ಎಂದು ಕಂಪನಿ ಹೇಳಿದೆ.
ಒಟ್ಟಿನಲ್ಲಿ, GPT-6 Astra ಕೋಡಿಂಗ್, ವಿಜ್ಞಾನ, ವೃತ್ತಿಪರ ಕೆಲಸಗಳು ಮತ್ತು ಸೈಬರ್ ಭದ್ರತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ AI ಬಳಕೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಮೂಡಿಸಿದೆ.
ಸಾರಿಕಾ ಪುಜಾರಿ





















