SK Home Ad
Home ಸುದ್ದಿ ರಾಜ್ಯ ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ: ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಗೆ ಚಾಲನೆ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ: ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಸೀಸನ್-3ಗೆ ಚಾಲನೆ

0
34
ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್ ಸೀಸನ್-3 ಅನ್ನು ಚಿತ್ರ ನಟ ಡಾರ್ಲಿಂಗ್ ಕೃಷ್ಣ ಮತ್ತು ನಟಿ ಐಂದ್ರಿತಾ ರೈ ಉದ್ಘಾಟಿಸಿದರು. ನಿರ್ದೇಶಕ ಎಸ್.ನಾರಾಯಣ್, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಲೀಗ್ ನ ಚೇರ್ಮನ್ ಸಿದ್ದರಾಮ್ ದೇಸಾಯಿ, ಫೌಂಡೇಷನ್‌ ಮುಖ್ಯಸ್ಥ ಡಾ. ಗಂಗಾಧರ್ ರಾಜು, ಖ್ಯಾತ ನಟ ರವಿಚೇತನ್ ಹಾಜರಿದ್ದರು.

ಬೆಂಗಳೂರು: ನಗರದ ಗಾಯತ್ರಿ ವಿಹಾರದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ (KSPL) ಸೀಸನ್-3ಕ್ಕೆ ಖ್ಯಾತ ನಟ ಡಾರ್ಲಿಂಗ್ ಕೃಷ್ಣ, ನಟಿ ಐಂದ್ರಿತಾ ರೈ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು. ಲೀಗ್‌ನಲ್ಲಿ ಒಟ್ಟು 32 ತಂಡಗಳು ಭಾಗವಹಿಸಲಿದ್ದು, 63 ಪಂದ್ಯಗಳು ನಡೆಯಲಿವೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಡಾರ್ಲಿಂಗ್ ಕೃಷ್ಣ, ಕ್ರಿಕೆಟ್ ಎಲ್ಲರ ಅಚ್ಚುಮೆಚ್ಚಿನ ಕ್ರೀಡೆಯಾಗಿದ್ದು, ಉತ್ತಮ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ದೊಡ್ಡ ವೇದಿಕೆ ಕಲ್ಪಿಸುವ KSPL ತಂಡದ ಪ್ರಯತ್ನ ಶ್ಲಾಘನೀಯ ಎಂದರು.

ತಾವು ಸಾಫ್ಟ್ ಬಾಲ್ ಪಂದ್ಯದಲ್ಲಿ ಆಡಿದ ಅನುಭವವನ್ನು ಹಂಚಿಕೊಂಡ ಅವರು, ‘ಸಾಫ್ಟ್ ಬಾಲ್’ ಎಂಬ ಹೆಸರಿನಿಂದ ಇದು ತುಂಬಾ ಸುಲಭದ ಆಟ ಎಂದುಕೊಂಡಿದ್ದೆ. ಆದರೆ ಆಟವಾಡಿದ ಬಳಿಕ ಇದು ಹೆಸರಿಗೆ ಮಾತ್ರ ಸಾಫ್ಟ್ ಬಾಲ್, ವಾಸ್ತವದಲ್ಲಿ ಸಾಕಷ್ಟು ಕಠಿಣ ಆಟ ಎಂಬುದು ತಿಳಿಯಿತು ಎಂದು ಹಾಸ್ಯಭರಿತವಾಗಿ ಹೇಳಿದರು. ಲೆದರ್ ಬಾಲ್ ಕ್ರಿಕೆಟ್‌ಗೂ ಸಾಫ್ಟ್ ಬಾಲ್‌ಗೂ ಸಾಕಷ್ಟು ವ್ಯತ್ಯಾಸವಿದೆ ಎಂದು ಅವರು ಅಭಿಪ್ರಾಯಪಟ್ಟರು.

ನಟಿ ಐಂದ್ರಿತಾ ರೈ ಮಾತನಾಡಿ, ಕ್ರಿಕೆಟ್‌ಗೆ ಅಪಾರ ಅಭಿಮಾನಿಗಳಿದ್ದು, ಗ್ರಾಮೀಣ ಪ್ರದೇಶಗಳಲ್ಲಿಯೂ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದಾರೆ. ಅಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಅವಕಾಶ ಕಲ್ಪಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ KSPL ತಂಡ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ KSPL ಕ್ರಿಕೆಟ್ ಫೌಂಡೇಷನ್‌ನ ಡಾ. ಗಂಗಾಧರ್ ರಾಜು ಮಾತನಾಡಿ, ಸಂಸ್ಥೆಯ ಆರಂಭದ ದಿನಗಳಲ್ಲಿ ಎದುರಿಸಿದ ಸವಾಲುಗಳು ಹಾಗೂ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸೂಕ್ತ ವೇದಿಕೆ ಕಲ್ಪಿಸಲು ನಡೆಸಿದ ಪ್ರಯತ್ನಗಳನ್ನು ವಿವರಿಸಿದರು.

“ಗ್ರಾಮೀಣ ಭಾಗದ ಕ್ರೀಡಾಪಟುಗಳು ನಮ್ಮ ಆಸ್ತಿ. ಅವರ ಬೆಳವಣಿಗೆಯೇ ನಮ್ಮ ಧ್ಯೇಯ” ಎಂದು ಹೇಳಿದ ಅವರು, ಗ್ರಾಮೀಣ ಪ್ರತಿಭೆಗಳು ಅಂತರರಾಷ್ಟ್ರೀಯ ಮಟ್ಟದ ಪಂದ್ಯಗಳಿಗೆ ಆಯ್ಕೆಯಾಗಬೇಕು ಎಂಬುದು ಸಂಸ್ಥೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ರಾಜ್ಯದ ಎಲ್ಲ ಜಿಲ್ಲೆಗಳಿಂದ ಕ್ರೀಡಾಪಟುಗಳನ್ನು ಗುರುತಿಸಿ ಆಯ್ಕೆ ಮಾಡುತ್ತಿರುವ ಮಾದರಿಯಲ್ಲೇ ರಾಷ್ಟ್ರಮಟ್ಟದಲ್ಲೂ ISPL ಪಂದ್ಯಾವಳಿ ಆಯೋಜಿಸುವ ಪರಿಕಲ್ಪನೆಯನ್ನು ಡಾ. ಗಂಗಾಧರ್ ರಾಜು ಕಾರ್ಯಕ್ರಮದಲ್ಲಿ ಹಂಚಿಕೊಂಡರು. ಇದರಿಂದ ರಾಜ್ಯದ ಪ್ರತಿಭೆಗಳಿಗೆ ರಾಷ್ಟ್ರೀಯ ಮಟ್ಟದಲ್ಲೂ ಅವಕಾಶ ಕಲ್ಪಿಸುವ ಉದ್ದೇಶ ಹೊಂದಲಾಗಿದೆ.

ಸೀಸನ್-3ರಲ್ಲಿ 32 ತಂಡಗಳು ಕಣಕ್ಕಿಳಿಯಲಿದ್ದು, ಒಟ್ಟು 63 ಪಂದ್ಯಗಳು ನಡೆಯಲಿವೆ. ರಾಜ್ಯದ ವಿವಿಧ ಭಾಗಗಳ ಕ್ರೀಡಾ ಪ್ರತಿಭೆಗಳು ಒಂದೇ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಈ ಲೀಗ್ ಅವಕಾಶ ಕಲ್ಪಿಸಲಿದೆ.

ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಅಧ್ಯಕ್ಷ ಸಿದ್ದರಾಮ್ ದೇಸಾಯಿ, ಸಾಫ್ಟ್ ಬಾಲ್ ಕ್ರಿಕೆಟ್ ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು, ನಿರ್ದೇಶಕ ಎಸ್. ನಾರಾಯಣ್, ನಟ ರವಿಚೇತನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸ್ಪರ್ಧಾತ್ಮಕ ವೇದಿಕೆ ಒದಗಿಸುವ ಮೂಲಕ ಸಾಫ್ಟ್ ಬಾಲ್ ಕ್ರೀಡೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಆಶಯದೊಂದಿಗೆ KSPL ಸೀಸನ್-3 ಆರಂಭಗೊಂಡಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.