ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ, ಸೆಪ್ಟೆಂಬರ್ 4, 2026ರಂದು ಬೆಳಗಿನ ಜಾವ 2:55ಕ್ಕೆ GSLV-F17 ರಾಕೆಟ್ ಮೂಲಕ EOS-05 (Earth Observation Satellite – 05) ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. EOS-05 ಈ ಉಪಗ್ರಹವನ್ನು GISAT-1A ಎಂದೂ ಕರೆಯಲಾಗುತ್ತದೆ. ಇಲ್ಲಿಯವರೆಗಿನ ಅತ್ಯಧಿಕ ಭಾರವಾದ ಪೇಲೊಡ್ ಎಂದು ಪರಿಗಣಿಸಲಾಗುತ್ತದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ಪ್ಯಾಡ್‌ನಿಂದ ರಾಕೆಟ್ ಉಡಾವಣೆಯಾಯಿತು. 8 ತಿಂಗಳ ನಂತರ ಇಸ್ರೋದ ಈ ಉಪಗ್ರಹವನ್ನುಉಡಾವಣೆ ಮಾಡಿದೆ.
EOS-05 ಎಂದರೇನು?
ಇದು ಭೂಮಿಯನ್ನು ವೀಕ್ಷಿಸುವ ಉಪಗ್ರಹವಾಗಿದ್ದು,EOS-05 ಭೂಸಮಕಾಲೀನ ಕಕ್ಷೆಯಿಂದ (Geosynchronous orbit) ಚಿತ್ರಗಳನ್ನು ಸೆರೆಹಿಡಿಯುವ ಭಾರತದ ಮೊದಲ ಉಪಗ್ರಹವಾಗಿದೆ. ಭಾರತೀಯ ಉಪಖಂಡವನ್ನು ನಿರಂತರವಾಗಿ ಗಮನಿಸುತ್ತದೆ. ಸಾಮಾನ್ಯ ರಿಮೋಟ್ ಸೆನ್ಸಿಂಗ್ ಉಪಗ್ರಹಗಳು ಕಡಿಮೆ ಎತ್ತರದಲ್ಲಿ ಸುತ್ತುತ್ತವೆ. ಇವು ನಿರ್ದಿಷ್ಟ ಸ್ಥಳದ ಚಿತ್ರವನ್ನು ಕೆಲವು ದಿನಗಳಿಗೊಮ್ಮೆ ಮಾತ್ರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಉಪಗ್ರಹ ಸುಮಾರು 2,367 ಕೆ.ಜಿ. ತೂಕ ಹೊಂದಿದ್ದು. GSLV-F17 ರಾಕೆಟ್‌ನ ಇದು 19ನೇ ಹಾರಾಟವಾಗಿದೆ.
ಈ ಉಪಗ್ರಹವು ಸಂಪೂರ್ಣ ಭಾರತೀಯ ಭೂಭಾಗದ ಚಿತ್ರವನ್ನು ಪ್ರತಿ 30 ನಿಮಿಷಗಳಿಗೊಮ್ಮೆ ತೆಗೆಯಲು ಸಾಧ್ಯ.ಪ್ರಮುಖ ಪ್ರದೇಶಗಳ ಚಿತ್ರಗಳನ್ನು ಇನ್ನೂ ಕಡಿಮೆ ಸಮಯದ ಅಂತರದಲ್ಲಿ ಪಡೆಯುವ ಸಾಮರ್ಥ್ಯವೂ ಇದೆ. ಇದರಲ್ಲಿ 700 ಮಿಲಿಮೀಟರ್‌ನ ಟೆಲಿಸ್ಕೋಪ್ ಅಳವಡಿಸಲಾಗಿದ್ದು, ಇದು ವಿಸಿಬಲ್, ನಿಯರ್-ಇನ್‌ಫ್ರಾರೆಡ್ ಮತ್ತು ಶಾರ್ಟ್-ವೇವ್ ಇನ್‌ಫ್ರಾರೆಡ್ ಬ್ಯಾಂಡ್‌ಗಳಲ್ಲಿ ಡೇಟಾವನ್ನು ಸಂಗ್ರಹಿಸುತ್ತದೆ.
ಈ ಉಪಗ್ರಹವು ವಿಪತ್ತು ನಿರ್ವಹಣೆಯಲ್ಲಿ ಬಹಳಷ್ಟು ಉಪಯುಕ್ತವಾಗಲಿದೆ. ಪ್ರವಾಹ, ಚಂಡಮಾರುತ ಮತ್ತು ಕಾಡ್ಗಿಚ್ಚಿನಂತಹ ಘಟನೆಗಳ ರಿಯಲ್-ಟೈಮ್ ಮೇಲ್ವಿಚಾರಣೆ ಸಾಧ್ಯವಾಗುತ್ತದೆ. ಕೃಷಿಯಲ್ಲಿ ಬೆಳೆಯ ಸ್ಥಿತಿ, ಮಣ್ಣಿನ ತೇವಾಂಶ ಮತ್ತು ಸಸ್ಯಗಳ ಆರೋಗ್ಯವನ್ನು ಅಂದಾಜು ಮಾಡಬಹುದು. ಇದರ ಹೊರತಾಗಿ, ರಾಷ್ಟ್ರೀಯ ಭದ್ರತೆ ಮತ್ತು ಪರಿಸರ ಮೇಲ್ವಿಚಾರಣೆಯಲ್ಲೂ ಸಹಾಯವಾಗುತ್ತದೆ. ಮೋಡರಹಿತ (Cloud-free) ಪರಿಸ್ಥಿತಿಗಳಲ್ಲಿ ಇದು ದೊಡ್ಡ ಪ್ರದೇಶಗಳ ಪುನರಾವರ್ತಿತ ಚಿತ್ರಗಳನ್ನು ಒದಗಿಸುತ್ತದೆ, ಇದರಿಂದ ಯೋಜಕರಿಗೆ ಮತ್ತು ವಿಜ್ಞಾನಿಗಳಿಗೆ ನಿಖರವಾದ ಮಾಹಿತಿ ಸಿಗಲಿದೆ.
ಗಡಿ ಮೇಲ್ವಿಚಾರಣೆಗೆ ನೆರವು
EOS-05 ಅನ್ನು ನೇರವಾಗಿ ಸೇನಾ ಅಥವಾ ಬೇಹುಗಾರಿಕಾ ಉಪಗ್ರಹ ಎಂದು ಕರೆಯಲಾಗುವುದಿಲ್ಲ. ಆದರೆ ಇದರ ಪದೇಪದೇ ಚಿತ್ರಗಳನ್ನು ಪಡೆಯುವ ಸಾಮರ್ಥ್ಯದಿಂದ ಗಡಿ, ಸಮುದ್ರ ಪ್ರದೇಶಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿನ ಬದಲಾವಣೆಗಳನ್ನು ಗಮನಿಸಲು ಭದ್ರತಾ ಸಂಸ್ಥೆಗಳಿಗೆ ನೆರವಾಗಬಹುದು.
ವಿಪತ್ತು ನಿರ್ವಹಣೆಗೆ ಸಹಾಯ
ಉಪಗ್ರಹದಿಂದ ದೊರೆಯುವ ಚಿತ್ರಗಳು ನೆರೆ, ಚಂಡಮಾರುತ ಮತ್ತು ಕಾಡ್ಗಿಚ್ಚು ಮುಂತಾದ ವಿಪತ್ತುಗಳ ಸಂದರ್ಭದಲ್ಲಿ ಉಪಯುಕ್ತವಾಗಲಿವೆ. ಯಾವ ಪ್ರದೇಶಕ್ಕೆ ಎಷ್ಟು ಹಾನಿಯಾಗಿದೆ ಎಂಬುದನ್ನು ಅಂದಾಜಿಸಲು ಸಹಾಯ ಮಾಡಬಹುದು.
ಕೃಷಿಗೂ ಉಪಯೋಗ
EOS-05 ಮೂಲಕ ಬೆಳೆಗಳ ಸ್ಥಿತಿ, ಮಣ್ಣಿನ ತೇವಾಂಶ, ಸಸ್ಯಗಳ ಆರೋಗ್ಯ ಹಾಗೂ ಭೂಮಿಯಲ್ಲಿನ ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಗಲಿದೆ. ಇದರಿಂದ ಕೃಷಿ ಯೋಜನೆಗಳಿಗೆ ಮಾಹಿತಿ ದೊರೆಯಲಿದೆ.
2021ರ ವೈಫಲ್ಯದ ಬಳಿಕ ಮಹತ್ವದ ಹೆಜ್ಜೆ
2021ರಲ್ಲಿ GSLV-F10 ಮೂಲಕ ಕಳುಹಿಸಲಾಗಿದ್ದ EOS-03 ಉಪಗ್ರಹವು ತಾಂತ್ರಿಕ ಸಮಸ್ಯೆಯಿಂದ ತನ್ನ ಉದ್ದೇಶಿತ ಕಕ್ಷೆ ತಲುಪಲು ಸಾಧ್ಯವಾಗಿರಲಿಲ್ಲ. ಇದೀಗ EOS-05 ಮೂಲಕ ಇಸ್ರೋ ಇದೇ ರೀತಿಯ ಭೂ ವೀಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ. GSLV -F17 ಮೂರು ಹಂತದ ರಾಕೆಟ್ ವಾಗಿದ್ದು ಇದರ ಎತ್ತರ 51.7ಮೀ ಮತ್ತು ಇದರ ತೂಕ 420.5 ಟನ್.
‘ನಾಟಿ ಬಾಯ್’ ಎಂಬ ಹೆಸರು ಏಕೆ?
GSLV ರಾಕೆಟ್‌ನ ಹಿಂದಿನ ಕೆಲವು ವೈಫಲ್ಯಗಳ ಕಾರಣದಿಂದ ಇದನ್ನು ಅನೌಪಚಾರಿಕವಾಗಿ ‘ನಾಟಿ ಬಾಯ್’ ಎಂದು ಕರೆಯಲಾಗುತ್ತಿತ್ತು. ಆದರೆ GSLV-F17 ಮೂಲಕ EOS-05 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದು ಇಸ್ರೋಗೆ ಮಹತ್ವದ ಸಾಧನೆಯಾಗಿದೆ.
ಭಾರತದ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಬಲ
ಈ ಉಪಗ್ರಹವನ್ನು ಸಬ್-ಜಿಯೋಸಿಂಕ್ರೊನಸ್ ಟ್ರಾನ್ಸ್‌ಫರ್ ಆರ್ಬಿಟ್‌ಗೆ (Sub-geosynchronous transfer orbit) ಹಾರಿಸಲಾಗುತ್ತದೆ, ಅಲ್ಲಿಂದ ಉಪಗ್ರಹವು ಸ್ವತಃ ತನ್ನ ಕಕ್ಷೆಯನ್ನು ತಲುಪಲಿದೆ. ಈ ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯಕ್ಕೆ ಹೊಸ ಎತ್ತರವನ್ನು ನೀಡಲಿದೆ. ಜಿಯೋಸಿಂಕ್ರೊನಸ್ ಇಮೇಜಿಂಗ್‌ನಿಂದ ದೇಶದ ಬಳಿ ನಿರಂತರ ಮೇಲ್ವಿಚಾರಣೆ ನಡೆಸುವ ಸಾಧನ ಲಭಿಸಲಿದೆ, ಇದು ಹಿಂದೆ ಇರಲಿಲ್ಲ.ಈ ಮಿಷನ್ ಮೂಲಕ ಭಾರತಕ್ಕೆ ದೊಡ್ಡ ಪ್ರದೇಶಗಳ ಭೂ ವೀಕ್ಷಣೆ, ವಿಪತ್ತು ನಿರ್ವಹಣೆ, ಕೃಷಿ, ಪರಿಸರ ಅಧ್ಯಯನ ಹಾಗೂ ಭದ್ರತಾ ಮೇಲ್ವಿಚಾರಣೆಗೆ ಹೆಚ್ಚಿನ ಮಾಹಿತಿ ದೊರೆಯಲಿದೆ.
-ಸಾರಿಕಾ ಪುಜಾರಿ




















