SK Home Ad
Home ಸುದ್ದಿ ನೀಲಗಿರಿಯಲ್ಲಿ ಮಳೆ ಕೊರತೆ: ಎಲ್ ನಿನೋ ಪ್ರಭಾವ; ಚಹಾಪುಡಿ ಬೇಲೆ ಏರಿಕೆ ಸಾಧ್ಯತೆ

ನೀಲಗಿರಿಯಲ್ಲಿ ಮಳೆ ಕೊರತೆ: ಎಲ್ ನಿನೋ ಪ್ರಭಾವ; ಚಹಾಪುಡಿ ಬೇಲೆ ಏರಿಕೆ ಸಾಧ್ಯತೆ

0
14

ನೀಲಗಿರಿ: ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ದೀರ್ಘಕಾಲದ ಬರ ಪರಿಸ್ಥಿತಿ ಚಹಾ ಬೆಳೆಗಾರರಿಗೆ ಸಂಕಷ್ಟ ತಂದಿದೆ. ಎಲ್-ನಿನೋ ಸೇರಿದಂತೆ ಹವಾಮಾನ ವೈಪರೀತ್ಯದ ಪರಿಣಾಮ ಚಹಾ ಗಿಡಗಳ ಹೊಸ ಚಿಗುರವೊಡೆದ ಎಲೆಗಳು ಒಣಗುತ್ತಿದ್ದು, ಚಹಾ ಕಾರ್ಖಾನೆಗಳಿಗೆ ಹಸಿರು ಎಲೆಗಳ ಪೂರೈಕೆ ಗಣನೀಯವಾಗಿ ಕಡಿಮೆಯಾಗಿದೆ.
ನೀಲಗಿರಿ ದೇಶದ ಪ್ರಮುಖ ಚಹಾ ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ 65 ಸಾವಿರಕ್ಕೂ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರು ಚಹಾ ಬೆಳೆಯುತ್ತಿದ್ದು, ಸಾವಿರಾರು ಕಾರ್ಮಿಕರ ಜೀವನವೂ ಚಹಾ ಉದ್ಯಮದ ಮೇಲೆ ಅವಲಂಬಿತವಾಗಿದೆ.

4,000 ಕೆ.ಜಿಯಿಂದ 600 ಕೆ.ಜಿಗೆ ಇಳಿದ ಪೂರೈಕೆ
ನೀಲಗಿರಿಯಲ್ಲಿ ಪ್ರಸ್ತುತ ಚಹಾದ ಎರಡನೇ ಸೀಸನ್ ಆರಂಭವಾಗಿದೆ. ಸಾಮಾನ್ಯವಾಗಿ ಈ ಸಮಯದಲ್ಲಿ ಗಿಡಗಳಲ್ಲಿ ಹೊಸ ಹಸಿರು ಎಲೆಗಳ ಚಿಗುರುಗಳು ವೇಗವಾಗಿ ಬೆಳೆಯುತ್ತವೆ. ಆದರೆ ಈ ಬಾರಿ ಮಳೆಯ ಕೊರತೆಯಿಂದ ಚಹಾ ಎಲೆಗಳು ಸರಿಯಾಗಿ ಬೆಳೆಯುತ್ತಿಲ್ಲ. ಊಟಿ, ಕೂನೂರು, ಕೋಟಗಿರಿ ಮತ್ತು ಮಂಜೂರು ಪ್ರದೇಶಗಳಲ್ಲಿನ ಹಲವು ಚಹಾ ಕಾರ್ಖಾನೆಗಳಿಗೆ ಹಸಿರು ಎಲೆಗಳ ಪೂರೈಕೆ ತೀವ್ರವಾಗಿ ಕುಸಿದಿದೆ. ದಿನಕ್ಕೆ ಸುಮಾರು 4,000 ಕೆ.ಜಿ. ಎಲೆಗಳು ಬರುತ್ತಿದ್ದ ಕೆಲವು ಕಾರ್ಖಾನೆಗಳಿಗೆ ಈಗ ಕೇವಲ 600ರಿಂದ 800 ಕೆ.ಜಿ. ಮಾತ್ರ ಪೂರೈಕೆಯಾಗುತ್ತಿದೆ.
ಇದರ ಪರಿಣಾಮ ಚಹಾ ಪುಡಿ ಉತ್ಪಾದನೆಯ ಮೇಲೂ ನೇರ ಪರಿಣಾಮ ಬೀರಿದ್ದು, ಕೆಲವು ಕಾರ್ಖಾನೆಗಳ ಉತ್ಪಾದನೆ 20ರಿಂದ 25ರಷ್ಟು ಕಡಿಮೆಯಾಗಿದೆ.

UPASI ಚಹಾ ಸಂಶೋಧನಾ ಸಂಸ್ಥೆಯ ಅಧ್ಯಯನದ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ನೀಲಗಿರಿಯಲ್ಲಿ ಮಳೆಯ ಪ್ರಮಾಣ ಸುಮಾರು 31 ಶೇಕಡಾ ಕುಸಿದಿದೆ. 2021ರಲ್ಲಿ ಸರಾಸರಿ 173.3 ಸೆಂ.ಮೀ. ಮಳೆಯಾಗಿದ್ದರೆ, 2025ರಲ್ಲಿ ಅದು 119.4 ಸೆಂ.ಮೀ.ಗೆ ಇಳಿಕೆಯಾಗಿದೆ. ಮಳೆಯ ಕೊರತೆಯ ಪರಿಣಾಮ ಚಹಾ ಉತ್ಪಾದನೆಯ ಮೇಲೂ ಬಿದ್ದಿದೆ. 2023ರಲ್ಲಿ ಪ್ರತಿ ಹೆಕ್ಟೇರ್ಗೆ ಸುಮಾರು 2,315 ಕೆ.ಜಿ. ಚಹಾ ಉತ್ಪಾದನೆಯಾಗಿದ್ದರೆ, 2025ರಲ್ಲಿ ಅದು 2,042 ಕೆ.ಜಿ.ಗೆ ಇಳಿದಿದೆ.
ಮಳೆ ಕೊರತೆಯ ಪರಿಣಾಮ ಕೆಲವು ತೋಟಗಳಲ್ಲಿ ಇನ್ನಷ್ಟು ಗಂಭೀರವಾಗಿದೆ. ಸಾಮಾನ್ಯವಾಗಿ ಒಂದು ಎಕರೆಯಿಂದ ತಿಂಗಳಿಗೆ ಸುಮಾರು 500 ಕೆ.ಜಿ. ಹಸಿರು ಚಹಾ ಎಲೆಗಳು ದೊರೆಯುತ್ತಿದ್ದರೆ, ಈಗ ಅದು ಸುಮಾರು 200 ಕೆ.ಜಿ.ಗೆ ಇಳಿದಿದೆ.
ತಜ್ಞರ ಪ್ರಕಾರ, ಪ್ರಸ್ತುತ ಚಹಾ ಉತ್ಪಾದನೆಯಲ್ಲಿ 10ರಿಂದ 20 ಶೇಕಡಾದಷ್ಟು ಕುಸಿತ ಕಂಡುಬಂದಿದೆ. ಬರ ಪರಿಸ್ಥಿತಿ ಮುಂದುವರಿದರೆ ಉತ್ಪಾದನೆ 50 ಶೇಕಡಾದಷ್ಟು ಕುಸಿಯುವ ಅಪಾಯವಿದೆ.
ಮಳೆ ಕೈಕೊಟ್ಟಿರುವುದರಿಂದ ಹಲವು ರೈತರು ಚಹಾ ತೋಟಗಳಿಗೆ ನೀರು ಪೂರೈಸಲು ನೀರನ್ನು ಖರೀದಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಹಾ ಮಾತ್ರವಲ್ಲದೆ ಕ್ಯಾರೆಟ್, ಈರುಳ್ಳಿ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯುವ ರೈತರೂ ಸಂಕಷ್ಟದಲ್ಲಿದ್ದಾರೆ.

ಸಣ್ಣ ಚಹಾ ಬೆಳೆಗಾರರಿಗೆ ಸರ್ಕಾರದಿಂದ ಆರ್ಥಿಕ ಹಾಗೂ ಅಗತ್ಯ ನೆರವು ನೀಡಬೇಕು ಎಂದು ಚಹಾ ಉದ್ಯಮಕ್ಕೆ ಸಂಬಂಧಿಸಿದವರು ತಮಿಳುನಾಡು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಹಸಿರು ಚಹಾ ಎಲೆಗಳ ಪೂರೈಕೆ ಕಡಿಮೆಯಾದರೆ ಚಹಾ ಪುಡಿ ಉತ್ಪಾದನೆಯೂ ಕುಸಿಯಬಹುದು. ಮುಂದಿನ ದಿನಗಳಲ್ಲಿ ಇದರ ಪರಿಣಾಮ ಚಹಾದ ಬೆಲೆ ಮತ್ತು ರಫ್ತಿನ ಮೇಲೂ ಬೀರುವ ಸಾಧ್ಯತೆ ಇದೆ.
ತಜ್ಞರ ಪ್ರಕಾರ ಸಮಸ್ಯೆ ಕೇವಲ ಕಡಿಮೆ ಮಳೆಯದ್ದಲ್ಲ. ಮಳೆಯ ನಡುವೆ ದೀರ್ಘ ಅಂತರ, ಕಡಿಮೆ ಅವಧಿಯಲ್ಲಿ ಭಾರಿ ಮಳೆ ಮತ್ತು ನಂತರ ದೀರ್ಘಕಾಲದ ಒಣಹವೆಯಿಂದ ಚಹಾ ಗಿಡಗಳ ಹೊಸ ಚಿಗುರುಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ನೀಲಗಿರಿ ಪ್ರದೇಶದಲ್ಲಿ ತಾಪಮಾನದಲ್ಲೂ ಏರಿಕೆ ದಾಖಲಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.
ಮಳೆ ಕೊರತೆ ಮುಂದುವರಿದರೆ ಚಹಾ ಉತ್ಪಾದನೆಯಷ್ಟೇ ಅಲ್ಲ, ನೀಲಗಿರಿಯ ಸಾವಿರಾರು ರೈತರು ಮತ್ತು ಕಾರ್ಮಿಕರ ಜೀವನೋಪಾಯದ ಮೇಲೂ ಗಂಭೀರ ಪರಿಣಾಮ ಬೀರುವ ಆತಂಕ ಎದುರಾಗಿದೆ.