ಕರ್ನಾಟಕದ ಶಿಕ್ಷಕರ ಹೆಸರಿನ ಮುಂದೆ ಇನ್ಮುಂದೆ ‘Tr ಗೌರವಸೂಚಕ ಪದ ಬಳಿಸಿ.’: ಡಿಕೆ ಶಿವಕುಮಾರ್
ವಿಜಯನಗರ: ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಕರ್ನಾಟಕ ಸರ್ಕಾರವು ರಾಜ್ಯದ ಶಿಕ್ಷಕರಿಗೆ ವಿಶೇಷ ಗೌರವ ನೀಡುವ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕರ್ನಾಟಕದ ಶಿಕ್ಷಕರು ತಮ್ಮ ಹೆಸರಿನ ಮುಂದೆ ‘Tr.’ (Teacher) ಎಂಬ ಗೌರವಸೂಚಕ ಪದವನ್ನು ಹೆಮ್ಮೆಯಿಂದ ಬಳಸಬಹುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಪ್ರಜಾಸೇವಾ ಅಭಿಯಾನ’ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಚಾಲನೆ ನೀಡಿ ಮಾತನಾಡಿ ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಡಿ.ಕೆ. ಶಿವಕುಮಾರ್ ಸಂದೇಶ ನೀಡಿದ್ದು, ರಾಷ್ಟ್ರವನ್ನು ಕಟ್ಟುವ ಪ್ರತಿಯೊಬ್ಬ ವ್ಯಕ್ತಿಯ ಹಿಂದೆಯೂ ಆ ವ್ಯಕ್ತಿಯನ್ನು ರೂಪಿಸಿದ ಒಬ್ಬ ಶಿಕ್ಷಕರಿರುತ್ತಾರೆ ಎಂದು ಶಿಕ್ಷಕರ ಮಹತ್ವವನ್ನು ಬಣ್ಣಿಸಿದ್ದಾರೆ.
ಕರ್ನಾಟಕದ ಸುಮಾರು 4.5 ಲಕ್ಷ ಶಿಕ್ಷಕರು ಸೇರಿದಂತೆ ದೇಶದ ಒಂದು ಕೋಟಿಗೂ ಅಧಿಕ ಶಿಕ್ಷಕರು ಪ್ರತಿದಿನ ಮಕ್ಕಳ ಮನಸ್ಸು, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ರೂಪಿಸುವ ಮಹತ್ವದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವೈದ್ಯರು, ಎಂಜಿನಿಯರ್‌ಗಳು, ರೈತರು, ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳು ಹಾಗೂ ಸಮಾಜವನ್ನು ಮುನ್ನಡೆಸುವ ನಾಯಕರು ಸೇರಿದಂತೆ ಪ್ರತಿಯೊಬ್ಬರ ಬದುಕಿನ ರೂಪುಗೊಳ್ಳುವಿಕೆಯ ಹಿಂದೆ ಶಿಕ್ಷಕರ ಪರಿಶ್ರಮವಿದೆ. ಮಕ್ಕಳಲ್ಲಿರುವ ಸಾಮರ್ಥ್ಯವನ್ನು ಮೊದಲಿಗೆ ಗುರುತಿಸಿ, “ಸಾಧಿಸುವುದು ನಿನಗೆ ಸಾಧ್ಯ” ಎಂಬ ಆತ್ಮವಿಶ್ವಾಸವನ್ನು ತುಂಬುವವರು ಶಿಕ್ಷಕರು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
‘Tr.’ ಬಳಕೆಗೆ ವಿಶೇಷ ಗೌರವ : ಶಿಕ್ಷಕರಿಗೆ ನೀಡಲಾಗುತ್ತಿರುವ ‘Tr.’ ಗೌರವಸೂಚಕ ಪದವು ಕೇವಲ ಒಂದು ಬಿರುದಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಪರರ ಬದುಕನ್ನು ರೂಪಿಸುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿಕ್ಷಕರ ನಿಸ್ವಾರ್ಥ ಸೇವೆಗೆ ಸಮಾಜ ಸಲ್ಲಿಸುವ ಕೃತಜ್ಞತೆಯ ಸಂಕೇತ ಇದಾಗಿದೆ ಎಂದು ಅವರು ವಿವರಿಸಿದ್ದಾರೆ.
“ಯಾವ ಸಮಾಜ ಶಿಕ್ಷಕರನ್ನು ಗೌರವಿಸುತ್ತದೆಯೋ, ಆ ಸಮಾಜದ ಭವಿಷ್ಯವೂ ಅಷ್ಟೇ ಉಜ್ವಲವಾಗಿರುತ್ತದೆ” ಎಂದು ಮುಖ್ಯಮಂತ್ರಿ ಸಂದೇಶ ನೀಡಿದ್ದಾರೆ.
ಶಿಕ್ಷಕರು ಕೇವಲ ಪಠ್ಯ ಬೋಧಿಸುವವರಲ್ಲ. ಮಕ್ಕಳಿಗೆ ಸರಿಯಾದ ದಾರಿ ತೋರಿಸುವುದು, ಅವರ ನಡತೆಯನ್ನು ರೂಪಿಸುವುದು, ಕನಸು ಕಾಣಲು ಪ್ರೇರೇಪಿಸುವುದು ಹಾಗೂ ತಮ್ಮ ಸಾಮರ್ಥ್ಯದ ಮೇಲೆ ವಿಶ್ವಾಸ ಮೂಡಿಸುವುದು ಶಿಕ್ಷಕರ ಪ್ರಮುಖ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಕರಿಗೆ ಮುಖ್ಯಮಂತ್ರಿಯ ನಮನ : ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಬ್ಬ ಶಿಕ್ಷಕರಿಗೂ ಕರ್ನಾಟಕದ ಜನತೆಯ ಪರವಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೃತಜ್ಞತೆ ಸಲ್ಲಿಸಿದ್ದಾರೆ. “ನಮ್ಮ ಮಕ್ಕಳನ್ನು ರೂಪಿಸಿದ್ದಕ್ಕೆ ನಿಮಗಿದೋ ಧನ್ಯವಾದಗಳು. ಕರ್ನಾಟಕವನ್ನು ಕಟ್ಟಿದ್ದಕ್ಕೆ ನಿಮಗಿದೋ ಕೃತಜ್ಞತೆಗಳು. ದೇಶವನ್ನು ಬೆಳೆಸಿದ್ದಕ್ಕೆ ನಿಮಗಿದೋ ಅನಂತ ಪ್ರಣಾಮಗಳು” ಎಂದು ಅವರು ಶಿಕ್ಷಕರ ಸೇವೆಯನ್ನು ಸ್ಮರಿಸಿದ್ದಾರೆ.
ಶಿಕ್ಷಕರ ನಿಸ್ವಾರ್ಥ ಸೇವೆಗೆ ‘Tr.’ ಎಂಬ ಗೌರವಸೂಚಕ ಪದ ಅರ್ಹ ಗೌರವವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ಈ ಘೋಷಣೆಯ ಮೂಲಕ ರಾಜ್ಯದ ಲಕ್ಷಾಂತರ ಶಿಕ್ಷಕರ ಸೇವೆಯನ್ನು ಸಾರ್ವಜನಿಕವಾಗಿ ಗುರುತಿಸುವ ಹಾಗೂ ಶಿಕ್ಷಕರ ವೃತ್ತಿಗೆ ಮತ್ತಷ್ಟು ಗೌರವ ಮತ್ತು ಸಾಮಾಜಿಕ ಮನ್ನಣೆ ನೀಡುವ ಸಂದೇಶವನ್ನು ಕರ್ನಾಟಕ ಸರ್ಕಾರ ನೀಡಿದೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.





















