ಕಲಬುರಗಿ: ಕಲಬುರಗಿಯ ಐದನೇ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಸಹಾಯಕ ಸರ್ಕಾರಿ ಅಭಿಯೋಜಕ (ಎಪಿಪಿ) ಸಂತೋಷಕುಮಾರ ಲೋಖಂಡೆ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಸಿದ್ದರಾಜು ಪಿ, ಡಿವೈಎಸ್ಪಿ ಬಸವರಾಜ ಯಲಿಗಾರ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಅರುಣಕುಮಾರ ಮುರಗುಂಡಿ ನೇತೃತ್ವದ ಲೋಕಾಯುಕ್ತ ತಂಡ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ.
ನ್ಯಾಯಾಲಯದ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಸಂಬಂಧಿಸಿದ ಬಾಕಿ ಕೆಲಸ ಪೂರ್ಣಗೊಳಿಸುವುದಾಗಿ ಹೇಳಿ ಆರೋಪಿ 10 ಸಾವಿರ ರೂ. ಲಂಚದ ಬೇಡಿಕೆ ಇತ್ತು. ದೂರದಾರ ರಾಹುಲ್ ಹೈದರಾಬಾದ್ ಅವರಿಂದ ನ್ಯಾಯಾಲಯದ ಸಂಕೀರ್ಣ ಬಳಿ ಹತ್ತು ಸಾವಿರ ಲಂಚದ ಹಣ ಸ್ವೀಕರುಸುತ್ತಿರುವಾಗಲೇ ಲೋಕಾಯುಕ್ತರು ಶಾಕ್ ನೀಡಿದ್ದಾರೆ.
ಹೈದರಾಬಾದ್ ಮೂಲದ ರಾಹುಲ್ ಬಟ್ಟೆ ವ್ಯಾಪಾರಿಯಾಗಿದ್ದರು. ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾಹುಲ್ ವಿರುದ್ಧ ಕಲಹ ಕೇಸ್ ದಾಖಲಾಗಿತ್ತು. ಈ ಕೇಸ್‌ನಲ್ಲಿ ರಾಜಿ ಮಾಡುವಂತೆ ಕೋರ್ಟ್ ಮೆಟ್ಟಿಲೇರಿದ್ದರು.
ಈ ವೇಳೆ ಹತ್ತು ಸಾವಿರ ನಗದು, 9 ಸೀರೆಗಳು, ನಾಲ್ಕು ಶರ್ಟ್‌ಗಳು, 4 ಲಂಡನ್ ಜೀನ್ಸ್‌ಪ್ಯಾಂಟ್, ಒಂದು ಜೊತೆ ಬೂಟ್, ನಾಲ್ವರು ಮಹಿಳೆಯರಿಗೆ ಉಡುಗೆ, ಆರು ಜೋಡಿ ಮಹಿಳೆಯರ ಚಪ್ಪಲಿ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.






















