SK Home Ad
Home ನಮ್ಮ ಜಿಲ್ಲೆ ಬಳ್ಳಾರಿ ಚಾರಿತ್ರ್ಯಕ್ಕೆ ಡಬಲ್ ಮರ್ಡರ್: ರಾಜಿ ಪಂಚಾಯತಿ ವೇಳೆ ರಕ್ತಪಾತ!

ಚಾರಿತ್ರ್ಯಕ್ಕೆ ಡಬಲ್ ಮರ್ಡರ್: ರಾಜಿ ಪಂಚಾಯತಿ ವೇಳೆ ರಕ್ತಪಾತ!

0
80

ಬಳ್ಳಾರಿ: ಪತ್ನಿಯ ಚಾರಿತ್ರ್ಯದ ಬಗ್ಗೆ ಮೂಡಿದ್ದ ಅನುಮಾನವೇ ದಾರುಣ ‌ ಡಬಲ್ ಮರ್ಡರ್‌ಗೆ ಕಾರಣವಾಗಿರುವ ಘಟನೆ ಬಳ್ಳಾರಿ ನಗರದ ಗುಗ್ಗರಹಟ್ಟಿ ಪ್ರದೇಶದಲ್ಲಿ ಮಂಗಳವಾರ ನಡೆದಿದೆ. ಪತ್ನಿ ಹಾಗೂ ಕುಟುಂಬದ ಕಲಹ ಬಗೆಹರಿಸಲು ರಾಜಿ ಪಂಚಾಯತಿಗೆ ಬಂದಿದ್ದ ಮಾವನನ್ನು ಪತಿ ಮತ್ತು ಆತನ ತಂದೆ ಸೇರಿ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

ಈ ಘಟನೆ ನಗರದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಮೃತರನ್ನು ನಾಗಲಕ್ಷ್ಮೀ (24) ಹಾಗೂ ಅವರ ತಂದೆ ಶ್ರೀನಿವಾಸ (48) ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗಲಕ್ಷ್ಮಿಯ ಪತಿ ತೇಜಾ (29) ಹಾಗೂ ಆತನ ತಂದೆ ಗುರುಶಂಕರ (50) ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘ಸಿನಿಮಾ ಎಲ್ಲಕ್ಕಿಂತ ದೊಡ್ಡದು’: ‘ಕರಾವಳಿ’ ವಿವಾದದ ಬಗ್ಗೆ ರಾಜ್ ಬಿ. ಶೆಟ್ಟಿ ಬೇಸರ

ಸಂಸಾರದಲ್ಲಿ ನಿರಂತರ ಕಲಹ : ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ತೇಜಾ ತನ್ನ ಪತ್ನಿ ನಾಗಲಕ್ಷ್ಮಿಯ ಚಾರಿತ್ರ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಕುಟುಂಬದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ನಾಗಲಕ್ಷ್ಮಿಯ ತಂದೆ ಶ್ರೀನಿವಾಸ ಅವರು ಮಂಗಳವಾರ ತೇಜಾ ಮನೆಗೆ ರಾಜಿ ಪಂಚಾಯತಿಗಾಗಿ ಆಗಮಿಸಿದ್ದರು.

ಮಾತಿನ ಚಕಮಕಿಯಿಂದ ದುರಂತ : ರಾಜಿ ಮಾತುಕತೆ ನಡೆಯುತ್ತಿದ್ದ ವೇಳೆ ಮಾತಿನ ಚಕಮಕಿ ತೀವ್ರಗೊಂಡಿದೆ. ಈ ವೇಳೆ ಕೋಪಗೊಂಡ ತೇಜಾ ಹಾಗೂ ಆತನ ತಂದೆ ಗುರುಶಂಕರ ಅವರು ಚಾಕುವಿನಿಂದ ನಾಗಲಕ್ಷ್ಮೀ ಮತ್ತು ಶ್ರೀನಿವಾಸ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.

ಇದನ್ನೂ ಓದಿ: ಕಾಕ್ರೋಚ್ ಪಕ್ಷದ ‘X’ ಖಾತೆ ತಡೆ ಆದೇಶ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಇಸ್ತ್ರಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ : ಆರೋಪಿಗಳ ಕುಟುಂಬ ದೋಬಿ (ಇಸ್ತ್ರಿ) ವೃತ್ತಿಯನ್ನು ಮಾಡಿಕೊಂಡು ಜೀವನ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಕುಟುಂಬ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

ಪೊಲೀಸರ ತನಿಖೆ ಆರಂಭ : ಘಟನಾ ಸ್ಥಳಕ್ಕೆ ಎಪಿಎಂಸಿ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದು, ಹತ್ಯೆಯ ಹಿಂದಿನ ನಿಖರ ಕಾರಣ ಹಾಗೂ ಘಟನೆಯ ಸಂಪೂರ್ಣ ವಿವರವನ್ನು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ‘PDO ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ’– ಡೆತ್‌ನೋಟ್‌ನಲ್ಲಿ ಆರೋಪ

ಪ್ರಾಥಮಿಕ ಮಾಹಿತಿ ಪ್ರಕಾರ ಪತ್ನಿಯ ಮೇಲಿನ ಅನುಮಾನವೇ ಈ ದ್ವಿ-ಹತ್ಯೆಗೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದರೂ, ನಿಖರ ಕಾರಣ ಪೊಲೀಸ್ ತನಿಖೆ ಪೂರ್ಣಗೊಂಡ ಬಳಿಕವೇ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.