ಬೆಂಗಳೂರು: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ಸ್ಟ್ರಾಂಡ್ ಲೈಫ್ ಸೈನ್ಸ್, ಇಂದು ತನ್ನ ಹೊಸ ಸಂಶೋಧನೆಗೆ ಭಾರತೀಯ ಪೇಟೆಂಟ್ ಪಡೆದಿರುವುದಾಗಿ ಘೋಷಿಸಿದೆ.
ಈ ವೇದಿಕೆಯು ಸೆಲ್-ಫ್ರೀ ಡಿಎನ್‌ಎ (cfDNA) ವಿಶ್ಲೇಷಣೆಯ ಮೂಲಕ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುತ್ತದೆ. ಅತ್ಯಾಧುನಿಕ ಸೀಕ್ವೆನ್ಸಿಂಗ್, ಗುಣಮಟ್ಟ ನಿಯಂತ್ರಣ, ಜೈವಿಕವಾಗಿ ಮಾಹಿತಿಯುಕ್ತ ಮೀಥೈಲೇಷನ್ (methylation), ಫ್ರಾಗ್ಮೆಂಟೋಮಿಕ್ ಫೀಚರ್ ಎಕ್ಸ್‌ಟ್ರ್ಯಾಕ್ಷನ್ ಮತ್ತು ಮೆಷಿನ್ ಲರ್ನಿಂಗ್ ತಂತ್ರಜ್ಞಾನಗಳನ್ನು ಬಳಸಿ, ಕೇವಲ ರಕ್ತದ ಮಾದರಿಯಿಂದಲೇ ಕ್ಯಾನ್ಸರ್ ಎಲ್ಲಿದೆ ಎಂಬುದನ್ನು ಸಹ ಇದು ಪತ್ತೆಹಚ್ಚಬಲ್ಲುದು.
ಕ್ಯಾನ್ಸರ್ ಉಂಟಾದಾಗ ಜೀನೋಮ್‌ನಾದ್ಯಂತ ಮೀಥೈಲೇಷನ್ ಮಾದರಿಗಳಲ್ಲಿ ವ್ಯಾಪಕ ಬದಲಾವಣೆಗಳಾಗುತ್ತವೆ. ಈ ಪೇಟೆಂಟ್‌ನಲ್ಲಿರುವ ಪ್ರಮುಖ ಆವಿಷ್ಕಾರವೆಂದರೆ, ಜೀನೋಮ್ ಸೀಕ್ವೆನ್ಸಿಂಗ್ ಬಳಸುವಾಗ ಅತಿ ಕಡಿಮೆ ನಷ್ಟ ಅಥವಾ ವೈಫಲ್ಯದೊಂದಿಗೆ ಈ ಮೀಥೈಲೇಷನ್ ಮಾದರಿಗಳನ್ನು ಪಡೆಯುವುದು. ಇದು ಕ್ಯಾನ್ಸರ್‌ನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಭಾರತದಲ್ಲಿ ಪ್ರತಿ ವರ್ಷ 1.5 ದಶಲಕ್ಷಕ್ಕೂ ಹೆಚ್ಚು ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ದುರದೃಷ್ಟವಶಾತ್, ಹೆಚ್ಚಿನ ರೋಗಿಗಳಲ್ಲಿ ಕ್ಯಾನ್ಸರ್ ಮುಂದುವರಿದ ಹಂತದಲ್ಲಿದ್ದಾಗ ಮಾತ್ರ ಪತ್ತೆಯಾಗುತ್ತದೆ, ಆಗ ಚಿಕಿತ್ಸೆಯ ಆಯ್ಕೆಗಳು ಸೀಮಿತವಾಗಿದ್ದು ಫಲಿತಾಂಶಗಳು ಅಷ್ಟೇನೂ ಉತ್ತಮವಾಗಿರುವುದಿಲ್ಲ. ಆರಂಭಿಕ ಪತ್ತೆಯು ಕ್ಯಾನ್ಸರ್ ಅನ್ನು ಮೊದಲ ಹಂತದಲ್ಲೇ ಗುರುತಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಶಿಫಾರಸು ಮಾಡಲಾದ ಸ್ಕ್ರೀನಿಂಗ್ ಪರೀಕ್ಷೆಗಳು ಕೆಲವೇ ಕೆಲವು ವಿಧದ ಕ್ಯಾನ್ಸರ್‌ಗಳಿಗೆ ಮಾತ್ರ ಸೀಮಿತವಾಗಿವೆ ಮತ್ತು ಅವುಗಳನ್ನು ಎಲ್ಲೆಡೆ ವಿಸ್ತರಿಸುವುದು ಕಷ್ಟ. ಆದರೆ, ಸೀಕ್ವೆನ್ಸಿಂಗ್ ವೆಚ್ಚ ಕಡಿಮೆಯಾಗುತ್ತಿರುವುದರಿಂದ, ಈ ಹೊಸ ಪೇಟೆಂಟ್ ತಂತ್ರಜ್ಞಾನವು ಸ್ಥಳೀಯ ಮೂಲಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿಲ್ಲದೇ, ದೊಡ್ಡ ಪ್ರಮಾಣದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವಿಕೆಯನ್ನು ಸುಲಭಗೊಳಿಸುತ್ತದೆ.
ಈ ಕುರಿತು ಮಾತನಾಡಿದ ಸ್ಟ್ರಾಂಡ್ ಲೈಫ್ ಸೈನ್ಸಸ್‌ನ ಸಿಇಒ ರಮೇಶ್ ಹರಿಹರನ್, “ಕ್ಯಾನ್ಸರ್ ಭಾರತದ ಅತಿದೊಡ್ಡ ಸಾರ್ವಜನಿಕ ಆರೋಗ್ಯ ಸವಾಲುಗಳಲ್ಲಿ ಒಂದಾಗಿರುವುದರಿಂದ, ಅದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡುವುದು ಅತ್ಯಂತ ಅವಶ್ಯಕ. ಈ ಪೇಟೆಂಟ್ ನಮ್ಮ ವೈಜ್ಞಾನಿಕ ಬದ್ಧತೆಯನ್ನು ತೋರಿಸುತ್ತದೆ. ರಕ್ತ ಪರೀಕ್ಷೆಯ ಮೂಲಕ ಕ್ಯಾನ್ಸರ್ ಪತ್ತೆ ಹಚ್ಚುವ ಎಐ (AI) ಆಧಾರಿತ ʻಲಿಕ್ವಿಡ್ ಬಯಾಪ್ಸಿ’ ತಂತ್ರಜ್ಞಾನವು, ಕ್ಯಾನ್ಸರ್ ಸ್ಕ್ರೀನಿಂಗ್ ಅನ್ನು ಹೆಚ್ಚು ನಿಖರವಾಗಿ, ಸುಲಭವಾಗಿ ಮತ್ತು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲು ಒಂದು ಮಹತ್ವದ ಹೆಜ್ಜೆಯಾಗಿದೆ” ಎಂದು ವಿವರಿಸಿದರು.
ಈ ಪೇಟೆಂಟ್ ಸಂಸ್ಥೆಯ ʻಲಿಕ್ವಿಡ್ ಬಯಾಪ್ಸಿ’ ವಿಭಾಗದ ಬೌದ್ಧಿಕ ಆಸ್ತಿಯನ್ನು (IP) ಮತ್ತಷ್ಟು ಬಲಪಡಿಸಿದ್ದು, ಎಐ ವಿಧಾನಗಳ ಮೂಲಕ ಆರಂಭಿಕ ಕ್ಯಾನ್ಸರ್ ಪತ್ತೆ ಮತ್ತು ನಿಖರವಾದ ಚಿಕಿತ್ಸೆಯನ್ನು ಒದಗಿಸುವ ಕಂಪನಿಯ ಕಾರ್ಯತಂತ್ರಕ್ಕೆ ಹೆಚ್ಚಿನ ಶಕ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.






















