SK Home Ad
Home ನಮ್ಮ ಜಿಲ್ಲೆ ದಾವಣಗೆರೆ ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಸಿಎಂ ಕುರ್ಚಿ ಭದ್ರವಿರಲ್ಲ

ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಸಿಎಂ ಕುರ್ಚಿ ಭದ್ರವಿರಲ್ಲ

0
21

ದಾವಣಗೆರೆ: ರಾಜ್ಯದಲ್ಲಿ ಮುಖ್ಯಮಂತ್ರಿಗಳು ಕೇವಲ 10 ಸಚಿವರೊಂದಿಗೆ ಸರ್ಕಾರ ನಡೆಸುತ್ತಿರುವುದನ್ನು ನೋಡಿದರೆ ಅವರಿಗೆ ಸ್ವತಃ ತಮ್ಮ ಸ್ಥಾನ ಕಳೆದುಕೊಳ್ಳುವ ಭಯ ಕಾಡುತ್ತಿರುವುದು ಎದ್ದು ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭವಿಷ್ಯ ನುಡಿದರು.

ದಾವಣಗೆರೆಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಶ್ರೀ ನಿಧಿ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವಾಗ ಮಂತ್ರಿಮಂಡಲದ ವಿಸ್ತರಣೆಗೆ ಮುಖ್ಯಮಂತ್ರಿಗಳು ಕೈ ಹಾಕುತ್ತಾರೋ, ಆವಾಗ ತಮ್ಮ ಬುಡಕ್ಕೆ ಬರುತ್ತದೆ ಎನ್ನುವ ಭಯದ ಕಾರಣದಿಂದಲೇ ಅವರು ಇದುವರೆಗೂ ಕ್ಯಾಬಿನೆಟ್ ವಿಸ್ತರಣೆ ಮಾಡುವ ದುಸ್ಸಾಹಸಕ್ಕೆ ಮುಂದಾಗುತ್ತಿಲ್ಲ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್‌ನಲ್ಲಿ ಕೌಂಟ್‌ಡೌನ್ ಶುರು: ಪತ್ರಕರ್ತರಿಗೆ ಹಾಗೂ ಹೊರಗಿನಿಂದ ನೋಡುವ ಜನರಿಗೆ ಸದ್ಯಕ್ಕೆ ಎಲ್ಲವೂ ಸರಿಹೋಗಿದೆ ಎಂದು ಅನ್ನಿಸುತ್ತಿರಬಹುದು. ಆದರೆ, ಯಾವ ದಿನ ಅವರು ಕ್ಯಾಬಿನೆಟ್ ವಿಸ್ತರಣೆಗೆ ಕೈ ಹಾಕುತ್ತಾರೋ, ಅಂದಿನಿಂದಲೇ ಈ ರಾಜ್ಯದ ಮುಖ್ಯಮಂತ್ರಿಗಳ ಕೌಂಟ್‌ಡೌನ್ ಆರಂಭವಾಗುತ್ತದೆ. ಕಾಂಗ್ರೆಸ್‌ನಲ್ಲಿ ತೀವ್ರ ಆಂತರಿಕ ಕಚ್ಚಾಟ ಪ್ರಾರಂಭವಾಗಲಿದ್ದು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈ ರಾಜ್ಯದಲ್ಲಿ ಮೂರನೇ ಮುಖ್ಯಮಂತ್ರಿ ಬಂದರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಅವರು ಭವಿಷ್ಯ ನುಡಿದರು.

ಸ್ವಯಂಕೃತ ಅಪರಾಧದಿಂದ ವಿರೋಧ ಪಕ್ಷದಲ್ಲಿದ್ದೇವೆ: ಇದೇ ವೇಳೆ ಬಿಜೆಪಿಯ ಸದ್ಯದ ರಾಜಕೀಯ ಸ್ಥಿತಿಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಅವರು, ಇವತ್ತು ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿದೆ. ನಾವು ವಿರೋಧ ಪಕ್ಷದಲ್ಲಿ ಕೂರಲು ಕಾಂಗ್ರೆಸ್ ಪಕ್ಷ ಎಷ್ಟು ಕಾರಣ, ನಾವು ಎಷ್ಟು ಕಾರಣ ಎಂದು ನಾನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ಆದರೆ, ನಮ್ಮ ಸ್ವಯಂಕೃತ ಅಪರಾಧದಿಂದಲೇ ನಾವು ಇಂದು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದೇವೆ ಎನ್ನುವ ವಾಸ್ತವವನ್ನು ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಸ್ವಪಕ್ಷದ ನಡೆಗಳ ಬಗ್ಗೆ ಬೇಸರ ವ್ಯಕ್ತಪಡಿಸಿದರು.