‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಗೈರುಹಾಜರಾಗಿದ್ದರಿಂದ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಡಬ್ಬಿಂಗ್, ಸಂಭಾವನೆ ಹಾಗೂ ಕಾರ್ಯಕ್ರಮಕ್ಕೆ ಗೈರಾಗಿದ್ದ ಕುರಿತು ನಿರ್ದೇಶಕ ಗುರುದತ್ ಗಾಣಿಗ ಮತ್ತು ನಟ ರಾಜ್ ಬಿ. ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಬಹುನಿರೀಕ್ಷಿತ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅವರ ಅನುಪಸ್ಥಿತಿ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿ, ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸಿ, ಚಿತ್ರದ ಪ್ರಚಾರ ಹಾಗೂ ಡಬ್ಬಿಂಗ್ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬೆಳವಣಿಗೆ ಕುರಿತು ಚಿತ್ರದ ನಿರ್ದೇಶಕ ಗುರುದತ್ ಗಾಣಿಗ ಮತ್ತು ನಟ ರಾಜ್ ಬಿ. ಶೆಟ್ಟಿ ಮಾಧ್ಯಮಗಳ ಮುಂದೆ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಪದ್ಮಶ್ರೀ ಪುರಸ್ಕೃತ, ‘ಬ್ರಿಡ್ಜ್ ಮ್ಯಾನ್’ ಖ್ಯಾತಿಯ ಗಿರೀಶ್ ಭಾರದ್ವಜ್ ನಿಧನ
ಕಾರ್ಯಕ್ರಮಕ್ಕೆ ಬರುತ್ತೇನೆ ಎಂದಿದ್ದ ಪ್ರಜ್ವಲ್ : ಘಟನೆ ಕುರಿತು ಮಾತನಾಡಿದ ನಿರ್ದೇಶಕ ಗುರುದತ್ ಗಾಣಿಗ, ಪ್ರಜ್ವಲ್ ದೇವರಾಜ್ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಹಿಂದಿನ ರಾತ್ರಿ ತಿಳಿಸಿದ್ದರು ಎಂದು ಹೇಳಿದರು. “ಪ್ರಜ್ವಲ್ ಅವರು ಬರುತ್ತಾರೆ ಎಂಬ ಮಾಹಿತಿಯ ಆಧಾರದ ಮೇಲೆ ಅವರ ಅಭಿಮಾನಿಗಳಿಗಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 100ಕ್ಕೂ ಹೆಚ್ಚು ಅಭಿಮಾನಿಗಳು ಆಗಮಿಸುತ್ತಾರೆ ಎಂದು ತಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅವರು ಕಾರ್ಯಕ್ರಮಕ್ಕೆ ಬರಲಿಲ್ಲ. ಏಕೆ ಬರಲಿಲ್ಲ ಎಂಬ ಮಾಹಿತಿ ನಮಗೂ ಲಭ್ಯವಾಗಿಲ್ಲ,” ಎಂದು ಅವರು ಹೇಳಿದರು.
ಡಬ್ಬಿಂಗ್ ಬಗ್ಗೆ ಗೊಂದಲ : ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಧ್ವನಿ ಬಳಸಲಾಗಿಲ್ಲ ಎಂಬ ವಿಚಾರವೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಗುರುದತ್ ಗಾಣಿಗ, “ಕರಾವಳಿ ಚಿತ್ರದ ಪಾತ್ರ ಮತ್ತು ಮಂಗಳೂರು ಶೈಲಿಯ ಭಾಷೆಗೆ ಪ್ರಜ್ವಲ್ ಅವರ ಧ್ವನಿ ಸೂಕ್ತವಾಗುತ್ತದೆಯೇ ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆದರೂ ಡಬ್ಬಿಂಗ್ ಮಾಡಿಸಲೆಂದೇ ಸ್ಟುಡಿಯೋವನ್ನು ಕಾಯ್ದಿರಿಸಿದ್ದೇವೆ.
ಇದನ್ನೂ ಓದಿ: ಬರಗಾಲ, ರೈತರ ಸಂಕಷ್ಟದತ್ತ ಸರ್ಕಾರದ ಗಮನ: CM ಡಿ.ಕೆ. ಶಿ ಭರವಸೆ
ಟ್ರೈಲರ್ ಬಿಡುಗಡೆಯ ಬಳಿಕ ಡಬ್ಬಿಂಗ್ ಮಾಡಲು ಅವರನ್ನು ಸಂಪರ್ಕಿಸಿದ್ದೇವೆ. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದು ಹೇಳಿದರು. ಚಿತ್ರವು ಇದೇ ಡಿಸೆಂಬರ್ 24ರಂದು ಬಿಡುಗಡೆಯಾಗಲಿದ್ದು, ಡಬ್ಬಿಂಗ್ ಸೇರಿದಂತೆ ಕೆಲವು ತಾಂತ್ರಿಕ ಕೆಲಸಗಳು ಇನ್ನೂ ಬಾಕಿ ಇವೆ ಎಂದರು.
ಸಂಭಾವನೆ ಕುರಿತು ನಿರ್ದೇಶಕರ ಸ್ಪಷ್ಟನೆ : ಪ್ರಜ್ವಲ್ ದೇವರಾಜ್ ಅವರ ಸಂಭಾವನೆ ವಿಚಾರಕ್ಕೂ ನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಪ್ರಜ್ವಲ್ ಅವರಿಗೆ ₹1.25 ಕೋಟಿ ಸಂಭಾವನೆ ನೀಡಲು ಒಪ್ಪಂದವಾಗಿದ್ದು, ಈಗಾಗಲೇ ₹1 ಕೋಟಿ ಪಾವತಿಸಲಾಗಿದೆ. ಉಳಿದ ₹25 ಲಕ್ಷ ನೀಡುವುದು ಬಾಕಿಯಿದೆ ಎಂದು ತಿಳಿಸಿದ್ದಾರೆ. ಅಲ್ಲದೆ, ಎರಡು ತಿಂಗಳಿಂದ ಪ್ರಜ್ವಲ್ ದೇವರಾಜ್ ಅವರೊಂದಿಗೆ ನೇರ ಸಂಪರ್ಕ ಸಾಧ್ಯವಾಗಿಲ್ಲ. ಅವರ ಮ್ಯಾನೇಜರ್ ಅವರು ನಟರು ಬ್ಯುಸಿಯಾಗಿದ್ದಾರೆ ಎಂದು ತಿಳಿಸುತ್ತಿದ್ದರು ಎಂದು ಗುರುದತ್ ಹೇಳಿದ್ದಾರೆ.
ಇದನ್ನೂ ಓದಿ: ‘PDO ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ’– ಡೆತ್‌ನೋಟ್‌ನಲ್ಲಿ ಆರೋಪ
ರಾಜ್ ಬಿ. ಶೆಟ್ಟಿ ಪ್ರತಿಕ್ರಿಯೆ : ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ನಟ ರಾಜ್ ಬಿ. ಶೆಟ್ಟಿ, ತಾವು ಈ ಚಿತ್ರದಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು. “ಈ ಚಿತ್ರಕ್ಕೆ ನಾನು ಮೊದಲ ಆಯ್ಕೆಯಾಗಿರಲಿಲ್ಲ. ನನಗಿಂತ ದೊಡ್ಡ ಕಲಾವಿದರು ಈ ಪಾತ್ರ ಮಾಡಬೇಕಿತ್ತು. ಕೆಲವು ಕಾರಣಗಳಿಂದ ನಾನು ನಟಿಸುವಂತಾಯಿತು. ನಾನು ಯಾರೊಂದಿಗೂ ಸ್ಪರ್ಧೆ ಮಾಡಲು ಬಂದಿಲ್ಲ. ಸಿನಿಮಾ ನನ್ನಿಗಿಂತ ದೊಡ್ಡದು,” ಎಂದು ಅವರು ಹೇಳಿದರು.
ಚಿತ್ರದ ಪೋಸ್ಟರ್ ಮತ್ತು ಟೀಸರ್‌ಗಳಲ್ಲಿ ಪ್ರಜ್ವಲ್ ದೇವರಾಜ್ ಅವರ ಹೆಸರೇ ಪ್ರಮುಖವಾಗಿ ಇದ್ದುದನ್ನು ಉಲ್ಲೇಖಿಸಿದ ಅವರು, “ನನ್ನ ಹೆಸರು ಇರಬೇಕೆಂದು ನಾನು ಯಾವತ್ತೂ ಕೇಳಿಲ್ಲ. ಸಿನಿಮಾ ಯಶಸ್ವಿಯಾಗುವುದೇ ಮುಖ್ಯ” ಎಂದು ಹೇಳಿದರು.
ಇದನ್ನೂ ಓದಿ: ‘AMMA ಸದಸ್ಯತ್ವಕ್ಕೆ ನಟಿಯರಾದ ರೇವತಿ, ಪದ್ಮಪ್ರಿಯಾ ರಾಜೀನಾಮೆ!
“ಮನುಷ್ಯನಂತೆ ಕೂತು ಮಾತನಾಡಬೇಕು” : ಪ್ರಜ್ವಲ್ ದೇವರಾಜ್ ಅವರೊಂದಿಗೆ ಈ ವಿಚಾರವನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕಿತ್ತು ಎಂದು ರಾಜ್ ಬಿ. ಶೆಟ್ಟಿ ಅಭಿಪ್ರಾಯಪಟ್ಟರು. “ಮನುಷ್ಯತ್ವ ಮುಖ್ಯ. ಇಂತಹ ಘಟನೆಗಳು ಬೇಸರ ಉಂಟುಮಾಡುತ್ತವೆ. ನಮ್ಮ ಚಿತ್ರರಂಗ ಯಾಕೆ ಬೆಳೆಯುತ್ತಿಲ್ಲ ಎಂದು ಕೆಲವರು ಪ್ರಶ್ನಿಸುತ್ತಾರೆ. ಇಂತಹ ಘಟನೆಗಳೂ ಅದಕ್ಕೆ ಕಾರಣವಾಗುತ್ತವೆ. ಈ ಚಿತ್ರದಿಂದ ಪ್ರಜ್ವಲ್ ಅವರಿಗೆ ದೊಡ್ಡ ಯಶಸ್ಸು ಸಿಕ್ಕರೆ ನನಗೆ ಸಂತೋಷವೇ” ಎಂದು ಅವರು ಹೇಳಿದರು.
ಅಭಿಮಾನಿಗಳ ಪ್ರತಿಭಟನೆ ವೈರಲ್ : ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಿರೂಪಕಿ ಅನುಶ್ರೀ ನಡೆಸಿಕೊಡುತ್ತಿದ್ದ ವೇಳೆ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಜೋರಾಗಿ ಪ್ರತಿಭಟನೆ ನಡೆಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪ್ರಸ್ತುತ ಈ ಬೆಳವಣಿಗೆ ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಚಿತ್ರತಂಡ ಮತ್ತು ಪ್ರಜ್ವಲ್ ದೇವರಾಜ್ ಅವರಿಂದ ಮುಂದಿನ ದಿನಗಳಲ್ಲಿ ಅಧಿಕೃತ ಸ್ಪಷ್ಟನೆ ಬರಬಹುದೇ ಎಂಬ ಕುತೂಹಲ ಮೂಡಿದೆ.






















