ಸಂ.ಕ.ಸಮಾಚಾರ ಬಾಗಲಕೋಟೆ: ಅನರ್ಹರಿಗೆ ನಿವೇಶನ ಹಂಚಿಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ (BTDA) ಪುನರ್ವಸತಿ ಅಧಿಕಾರಿಗಳ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಪರಿಶೀಲಿಸಿದರು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ (ಎಸ್‌ಪಿ) ಮಹಾನಿಂಗ ನಂದಗಾಂವಿ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸುರೇಶ ರೆಡ್ಡಿ ನೇತೃತ್ವದ ತಂಡ ದಾಳಿ ನಡೆಸಿತು. ಈ ಕಾರ್ಯಾಚರಣೆಯಲ್ಲಿ ಧಾರವಾಡ ಹಾಗೂ ಗದಗ ಲೋಕಾಯುಕ್ತ ಘಟಕದ ಅಧಿಕಾರಿಗಳೂ ಭಾಗವಹಿಸಿ ದಾಖಲೆಗಳ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: 10 ಹೊಸ ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಸಂಪುಟ ಗ್ರೀನ್ ಸಿಗ್ನಲ್
18 ನಿವೇಶನ ಹಂಚಿಕೆ ಕುರಿತು ದೂರು : ಮಾಹಿತಿಯ ಪ್ರಕಾರ, 18 ನಿವೇಶನಗಳನ್ನು ಅನರ್ಹರಿಗೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪದಡಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿತ್ತು. ದೂರಿನ ಆಧಾರದ ಮೇಲೆ ಪ್ರಾಥಮಿಕ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು, ಸಂಬಂಧಿಸಿದ ಕಡತಗಳು, ಅರ್ಜಿಗಳು, ಅನುಮೋದನಾ ದಾಖಲೆಗಳು ಹಾಗೂ ಹಂಚಿಕೆ ಪ್ರಕ್ರಿಯೆಗೆ ಸಂಬಂಧಿಸಿದ ಮಾಹಿತಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ.
ದಾಖಲೆಗಳ ಪರಿಶೀಲನೆ : ದಾಳಿಯ ವೇಳೆ ಕಚೇರಿಯಲ್ಲಿದ್ದ ಹಲವು ಕಡತಗಳು, ನಿವೇಶನ ಹಂಚಿಕೆ ದಾಖಲೆಗಳು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗೆ ಸಂಬಂಧಿಸಿದ ದಾಖಲೆಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು. ಹಂಚಿಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೇ, ಫಲಾನುಭವಿಗಳ ಅರ್ಹತೆಯನ್ನು ಸರಿಯಾಗಿ ಪರಿಶೀಲಿಸಲಾಗಿದೆಯೇ ಹಾಗೂ ಯಾವುದೇ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಇದನ್ನೂ ಓದಿ: ಕೌಶಂಬಿ LPG ಟ್ಯಾಂಕರ್ ಅಪಘಾತದ ಭೀಕರ CCTV ದೃಶ್ಯ ಬಹಿರಂಗ!
ಎಸ್‌ಪಿ ಮಹಾನಿಂಗ ನಂದಗಾಂವಿ ಹೇಳಿದ್ದೇನು? : ದಾಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಎಸ್‌ಪಿ ಮಹಾನಿಂಗ ನಂದಗಾಂವಿ, “18 ನಿವೇಶನಗಳ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ. ದೂರಿನ ಆಧಾರದ ಮೇಲೆ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
ತನಿಖೆ ಮುಂದುವರಿಕೆ : ಲೋಕಾಯುಕ್ತ ಅಧಿಕಾರಿಗಳು ಸಂಗ್ರಹಿಸಿರುವ ದಾಖಲೆಗಳ ಆಧಾರದ ಮೇಲೆ ಮುಂದಿನ ಹಂತದ ತನಿಖೆ ನಡೆಸಲಿದ್ದಾರೆ. ತನಿಖೆಯಲ್ಲಿ ಅಕ್ರಮಗಳು ದೃಢಪಟ್ಟರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ದಾಳಿಯಿಂದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಕಾರ್ಯವೈಖರಿ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ.





















