SK Home Ad
Home ಸುದ್ದಿ ದೇಶ ಕೌಶಂಬಿ LPG ಟ್ಯಾಂಕರ್ ಅಪಘಾತದ ಭೀಕರ CCTV ದೃಶ್ಯ ಬಹಿರಂಗ!

ಕೌಶಂಬಿ LPG ಟ್ಯಾಂಕರ್ ಅಪಘಾತದ ಭೀಕರ CCTV ದೃಶ್ಯ ಬಹಿರಂಗ!

0
103

ಕೌಶಂಬಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯ ಸಿಹೋರಿ ಟೋಲ್ ಪ್ಲಾಜಾದಲ್ಲಿ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ ಎಲ್‌ಪಿಜಿ (LPG) ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಕಾಂಕ್ರೀಟ್ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ಅನಿಲ ಸೋರಿಕೆಯಾಗಿ ಕ್ಷಣಾರ್ಧದಲ್ಲೇ ಬೃಹತ್ ಬೆಂಕಿಯ ಉಂಡೆಯಾಗಿ ಪರಿವರ್ತನೆಯಾಯಿತು. ಜೂನ್ 26 ರಂದು ಉತ್ತರ ಪ್ರದೇಶದ ಕೌಶಂಬಿಯಲ್ಲಿ ಸಂಭವಿಸಿದ ಬೃಹತ್ ಎಲ್‌ಪಿಜಿ ಗ್ಯಾಸ್ ಟ್ಯಾಂಕರ್ ಅಪಘಾತದ ಸಿಸಿಟಿವಿ ದೃಶ್ಯಗಳು ಬೆಳಕಿಗೆ ಬಂದಿವೆ.

ವೇಗವಾಗಿ ಬಂದ ಟ್ಯಾಂಕರ್ ವಿಭಜಕಕ್ಕೆ ಡಿಕ್ಕಿ ಹೊಡೆದಿರುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಪರಿಣಾಮ, ಅನಿಲ ಸೋರಿಕೆಯಾಗಲು ಪ್ರಾರಂಭಿಸಿತು, ಇದು ಪ್ರದೇಶದಾದ್ಯಂತ ವೇಗವಾಗಿ ಹರಡಿತು. ನಂತರ ಟ್ಯಾಂಕರ್ ಬೆಂಕಿಗೆ ಆಹುತಿಯಾಗಿ ಇಡೀ ಪ್ರದೇಶವನ್ನು ಆವರಿಸಿತು. ಈ ಭೀಕರ ಘಟನೆಯಲ್ಲಿ ಟ್ಯಾಂಕರ್ ಚಾಲಕ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಈ ಘಟನೆ ಕೌಶಂಬಿ ಜಿಲ್ಲೆಯ ಕೊಖರಾಜ್ ಬೈಪಾಸ್‌ನಲ್ಲಿರುವ ಸಿಹೋರಿ ಟೋಲ್ ಪ್ಲಾಜಾದಲ್ಲಿ ಸಂಭವಿಸಿದೆ. ಟ್ಯಾಂಕರ್ ಚಾಲಕ ಮತ್ತೊಂದು ವಾಹನವನ್ನು ಹಿಂದಿಕ್ಕುವ ವೇಳೆ ನಿಯಂತ್ರಣ ಕಳೆದುಕೊಂಡು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಟೋಲ್ ಪ್ಲಾಜಾದ ಬೂತ್‌ಗೆ ನುಗ್ಗಿದ ಪರಿಣಾಮ ಟ್ಯಾಂಕರ್‌ನಿಂದ ಎಲ್‌ಪಿಜಿ ಅನಿಲ ಸೋರಿಕೆಯಾಗಿದ್ದು, ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟದೊಂದಿಗೆ ಬೆಂಕಿ ಕಾಣಿಸಿಕೊಂಡಿದೆ.

ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಬೆಂಕಿಯ ಜ್ವಾಲೆಗಳು ಹಲವು ಮೀಟರ್ ಎತ್ತರಕ್ಕೆ ಚಿಮ್ಮಿದ್ದು, ದಟ್ಟ ಕಪ್ಪು ಹೊಗೆ ಹಲವು ಕಿಲೋಮೀಟರ್ ದೂರದಿಂದಲೂ ಗೋಚರಿಸಿತು. ಟೋಲ್ ಪ್ಲಾಜಾದಲ್ಲಿದ್ದ ಸಿಬ್ಬಂದಿ ಹಾಗೂ ವಾಹನ ಸವಾರರಲ್ಲಿ ಆತಂಕ ಮನೆಮಾಡಿ, ಜನರು ಜೀವ ಉಳಿಸಿಕೊಳ್ಳಲು ಓಡಿ ಪಾರಾದರು.

ಘಟನೆಯಲ್ಲಿ ಟ್ಯಾಂಕರ್ ಚಾಲಕ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾನೆ. ಟೋಲ್ ಪ್ಲಾಜಾದ ಸಿಬ್ಬಂದಿಯೂ ಗಂಭೀರವಾಗಿ ಸುಟ್ಟು ಗಾಯಗೊಂಡಿದ್ದು, ಅವರಲ್ಲಿ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇತ್ತೀಚಿನ ಮಾಹಿತಿಯಂತೆ ಒಟ್ಟು ನಾಲ್ವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಭೀಕರ ಬೆಂಕಿಯಿಂದ ಟೋಲ್ ಪ್ಲಾಜಾದ ಆಡಳಿತ ಕಚೇರಿ, ಟಿಕೆಟ್ ಸಂಗ್ರಹ ಯಂತ್ರಗಳು ಹಾಗೂ ಸಿಸಿಟಿವಿ ವ್ಯವಸ್ಥೆಗೆ ವ್ಯಾಪಕ ಹಾನಿಯಾಗಿದೆ. ಅಲ್ಲದೆ ಟೋಲ್ ಪ್ಲಾಜಾ ಸಮೀಪ ನಿಲ್ಲಿಸಲಾಗಿದ್ದ 16 ಮೋಟಾರ್‌ಸೈಕಲ್‌ಗಳು ಹಾಗೂ ಎರಡು ಕಾರುಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ.

ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಹಲವು ವಾಹನಗಳು, ಪೊಲೀಸ್ ಸಿಬ್ಬಂದಿ ಹಾಗೂ ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸುಮಾರು ಎರಡು ಗಂಟೆಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಸುರಕ್ಷತಾ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಿ ವಾಹನಗಳನ್ನು ಪರ್ಯಾಯ ಮಾರ್ಗಗಳಿಗೆ ತಿರುಗಿಸಲಾಯಿತು.